ADVERTISEMENT

ಬಾಲಕನನ್ನು ಬದುಕಿಸಿದ ಗಿರೀಶ!

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 20:15 IST
Last Updated 24 ನವೆಂಬರ್ 2018, 20:15 IST
ಗಿರೀಶ್‌
ಗಿರೀಶ್‌   

ಮಂಡ್ಯ: ‘ಬಸ್‌ ನಾಲೆಯೊಳಗೆ ಬಿದ್ದೊಡನೆ ಎಲ್ಲರೂ ಮುಂದೆ ಜಾರಿದರು. ನಾನೂ ಜಾರಿ ಹೋದೆ. ಕಿಟಕಿಯಲ್ಲಿ ಸರಳು ಇರಲಿಲ್ಲ. ಜೊತೆಗೆ ನಾನೂ ಸಣ್ಣಗಿದ್ದ ಕಾರಣ ಕಿಟಕಿಯಿಂದ ಹೊರಬರಲು ಸಾಧ್ಯವಾಯಿತು. ಶಾಲೆಯ ಸಮವಸ್ತ್ರ ಧರಿಸಿದ್ದ ಹುಡುಗನೊಬ್ಬ ಹೊರಬರಲು ಯತ್ನಿಸುತ್ತಿದ್ದ, ತಕ್ಷಣ ಅವನನ್ನು ಎಳೆದುಕೊಂಡೆ’ ಎಂದು ಗಿರೀಶ್‌ ನಿಟ್ಟುಸಿರುಬಿಟ್ಟರು.

26 ವರ್ಷ ವಯಸ್ಸಿನ ಗಿರೀಶ್‌ ತಾನೂ ಬದುಕಿ, ಬಾಲಕನೊಬ್ಬನನ್ನು ಬದುಕಿಸಿದ ಸಾಹಸಗಾಥೆ ಇದು. 22 ಅಡಿ ಆಳವಿದ್ದ ವಿಶ್ವೇಶ್ವರಯ್ಯ ನಾಲೆಯಲ್ಲಿ ಬಸ್‌ ಮುಳುಗಿದಾಗ ಹೊರಬರಲು ಸಾಧ್ಯವಾಗಿದ್ದು ಗಿರೀಶ್‌ ಒಬ್ಬರಿಗೆ ಮಾತ್ರ.

‘ರಸ್ತೆಯಲ್ಲಿ ಬರುತ್ತಿದ್ದ ವಾಹನ ತಕ್ಷಣ ಎಡಕ್ಕೆ ತಿರುಗುತ್ತಿದ್ದಂತೆ ಬಾಗಿಲು ಸಮೀಪದಲ್ಲೇ ನಿಂತಿದ್ದ ನಿರ್ವಾಹಕ ತಕ್ಷಣ ಹೊರಕ್ಕೆ ಜಿಗಿದ. ಕ್ಷಣಮಾತ್ರದಲ್ಲಿ ಬಸ್‌ ನೀರಿನೊಳಗಿತ್ತು. ಬಸ್‌ನ ಮುಂಭಾಗ ನೆಲಕ್ಕೆ ತಾಗಿತ್ತು. ಎಲ್ಲರೂ ಮುಂದಕ್ಕೆ ಬಿದ್ದ ಕಾರಣ ಯಾರನ್ನೂ ಬದುಕಿಸಲು ಸಾಧ್ಯವಾಗಲಿಲ್ಲ. ರೋಹಿತ್‌ನನ್ನು ಮಾತ್ರ ಬದುಕಿಸಲು ಸಾಧ್ಯವಾಯಿತು’ ಎಂದು ಗಿರೀಶ್‌ ಅಪಘಾತದ ಭಯಾನಕ ದೃಶ್ಯವನ್ನು ನೆನಪಿಸಿಕೊಂಡರು.

ADVERTISEMENT

ದಿನ ದುರಂತಗಳು

* 1976: ಮಂಡ್ಯ ತಾಲ್ಲೂಕು ದುದ್ದ ಬಳಿ ವಿಶ್ವೇಶ್ವರಯ್ಯ ನಾಲೆಗೆ ಬಸ್ ಉರುಳಿ 95 ಪ್ರಯಾಣಿಕರು ಬಲಿ.

* 1985: ಮಂಡ್ಯ ತಾಲ್ಲೂಕು ಬೂದನೂರು ಬಳಿ ತೆರೆದ ಬಾವಿಗೆ ವ್ಯಾನ್ ಬಿದ್ದು 16 ಜನ ಮೃತ.

* 1985ರಲ್ಲಿ ಹಿರಿಯೂರು ತಾಲ್ಲೂಕಿನ ನಾಗೇನಹಳ್ಳಿ ಬಳಿ ವೇದಾವತಿ ನದಿಗೆ ಬಸ್ ಬಿದ್ದು 18 ಜನರ ಸಾವು.

* 1992: ಹರಿಹರ–ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಸೂಳೆಕೆರೆ ಹಳ್ಳಕ್ಕೆ ನಿರ್ಮಿಸಲಾಗಿರುವ ಸೇತುವೆ ಮೇಲಿಂದ ಬಸ್ ಹಳ್ಳಕ್ಕೆ ಉರುಳಿ 15 ಮಂದಿ ಮೃತ.

* 1995: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹಳೇ ಯಳನಾಡು ಬಳಿಯ ವೇದಾವತಿ ನದಿಗೆ ಬಸ್ ಉರುಳಿ 19 ಮಂದಿ ಜಲಸಮಾಧಿ

* 1996: ಚಿತ್ರದುರ್ಗ ನಗರದ ಸಂತೆಹೊಂಡಕ್ಕೆ ಖಾಸಗಿ ಬಸ್ ಬಿದ್ದು 61 ಪ್ರಯಾಣಿಕರ ಬಲಿ.

* 1999 ಜೂನ್‌: ಹರಿಹರ ತಾಲ್ಲೂಕು ದೇವರಬೆಳಕೆರೆ ಜಲಾಶಯಕ್ಕೆ ಬಸ್ ಉರುಳಿ 96 ಮಂದಿ ಮೃತ.

* 1999ರ ಆಗಸ್ಟ್‌ 26: ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದ ಅರಸನ ಬಾವಿ (ಹೊಂಡ) ಬಸ್ ಉರುಳಿ 45 ಜನ ಮೃತ.

* 2005 ಜನವರಿ 10: ವಿಜಯಪುರದ ನಿಡಗುಂದಿ ಸಮೀಪ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಕೆಎಸ್‌ಆರ್‌ಟಿಸಿ ಬಸ್ ಬಿದ್ದು 58 ಪ್ರಯಾಣಿಕರ ಸಾವು.

* 2006 ಆಗಸ್ಟ್‌ 29: ಆಲಮಟ್ಟಿ ಜಲಾಶಯ ಮುಂಭಾಗದ ಸೇತುವೆ ಮೇಲಿನಿಂದ ಕೃಷ್ಣಾ ನದಿಗೆ ಟೆಂಪೊ ಉರುಳಿ 28 ಮಂದಿ ಬಲಿ.

* 2008ರ ಆಗಸ್ಟ್‌ 14: ಮಂಗಳೂರು ತಾಲ್ಲೂಕಿನ ಉಳಾಯಿಬೆಟ್ಟು ಬಳಿ ಶಾಲಾ ವಾಹನ ಗುರುಪುರ ನದಿಗೆ ಬಿದ್ದು 11 ಮಕ್ಕಳು ಮೃತ.

* 2009 ಮೇ 20: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕು ಮಾಚೇನಹಳ್ಳಿ ಬಳಿ ಜಿನಗಿಹಳ್ಳಿ ಎತ್ತಿನಗಾಡಿ ಉರುಳಿ 22 ಮಂದಿ ಮೃತ.

* 2010: ಮೈಸೂರು–ನಂಜನಗೂಡು ನಡುವಿನ ಉಂಬತ್ತಿ ಕೆರೆಗೆ ಟೆಂಪೊ ಬಿದ್ದು 23 ಮಂದಿ ಸಾವು.

* 2000: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಕಲ್ಕುಣಿ ಕೆರೆಗೆ ಸರ್ಕಾರಿ ಬಸ್ ಬಿದ್ದು 7 ಮಂದಿ ಮೃತ.

* 2013: ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಕೆಎಸ್‌ಆರ್‌ಟಿಸಿ ಬಸ್ ಬಿದ್ದು ಎಂಟು ಪ್ರಯಾಣಿಕರು ಬಲಿ.

* 2014ರ ಡಿಸೆಂಬರ್‌ 14ರಂದು ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಗೆ ಅಮರೇಶ್ವರ ಬಸ್‌ ಉರುಳಿ ಮೂವರು ಮೃತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.