ADVERTISEMENT

ಮೊಳಕಾಲ್ಮುರು: ಬಸ್ ಪ್ರಯಾಣ ದರ ಏರಿಕೆ–ಇಳಿಕೆ ಆಟ!

ಬರಗಾಲದಿಂದ ತತ್ತರಿಸಿರುವ ಜನರಿಗೆ ಬೆಲೆ ಏರಿಕೆ ಬಿಸಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 4 ಡಿಸೆಂಬರ್ 2018, 17:39 IST
Last Updated 4 ಡಿಸೆಂಬರ್ 2018, 17:39 IST
ಚಳ್ಳಕೆರೆ–ಬಳ್ಳಾರಿ ಮಧ್ಯೆ ಸಂಚರಿಸುವ ‘ಪ್ರಯಾಣದರ ಸ್ನೇಹಿ’ ಸಾರಿಗೆ ಸಂಸ್ಥೆ ಬಸ್ಸು
ಚಳ್ಳಕೆರೆ–ಬಳ್ಳಾರಿ ಮಧ್ಯೆ ಸಂಚರಿಸುವ ‘ಪ್ರಯಾಣದರ ಸ್ನೇಹಿ’ ಸಾರಿಗೆ ಸಂಸ್ಥೆ ಬಸ್ಸು   

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ರಾಜ್ಯ ಈಶಾನ್ಯ ಸಾರಿಗೆ ಸಂಸ್ಥೆಯು ಬಸ್‌ ಪ್ರಯಾಣ ದರವನ್ನು ಫೆಬ್ರುವರಿಯಲ್ಲಿ ಇಳಿಸಿ ಜನರನ್ನು ಆಕರ್ಷಿಸಿತ್ತು. ಈಗ ಏಕಾಏಕಿ ದರ ಹೆಚ್ಚಳ ಮಾಡಿರುವುದರಿಂದ ಬರಪೀಡಿತ ಪ್ರದೇಶಗಳ ಜನರು ಗೊಂದಲಕ್ಕೆ ಒಳಗಾಗಿದ್ದಾರೆ.

ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಮತ್ತು ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ಗಳ ಕಡೆ ಪ್ರಯಾಣಿಕರನ್ನು ಸೆಳೆಯಲು ಇದೇ ವರ್ಷ ಫೆ.9ರಂದು ‘ಪ್ರೋತ್ಸಾಹಕರ ಪ್ರಯಾಣದರ’ ಎಂಬ ಶೀರ್ಷಿಕೆಯಡಿ ಶೇ 25–30ರಷ್ಟು ಪ್ರಯಾಣ ದರ ಇಳಿಕೆ ಮಾಡಲಾಗಿತ್ತು. ಇದರಿಂದಾಗಿ ನಿರೀಕ್ಷೆಗೂ ಮೀರಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ನಿರ್ವಾಹಕರು.

ಆ ಆದೇಶದಂತೆ ಚಳ್ಳಕೆರೆ–ಬಳ್ಳಾರಿ ಪ್ರಯಾಣ ದರವನ್ನು ₹ 107ರಿಂದ ₹80ಕ್ಕೆ ಇಳಿಕೆಯಾಯಿತು. ಜತೆಗೆ ಈ ಮಾರ್ಗದಲ್ಲಿನ ಎಲ್ಲಾ ನಿಲುಗಡೆ ಸ್ಥಳಗಳ ದರವನ್ನು ಅಂತರಕ್ಕೆ ತಕ್ಕಂತೆ ಕಡಿಮೆ ಮಾಡಲಾಯಿತು. ಆದರೆ ಒಂದು ತಿಂಗಳ ಹಿಂದೆ, ನಿರ್ವಹಣೆ ವೆಚ್ಚ ಹೆಚ್ಚಾಗಿರುವ ಕಾರಣ ಮುಂದಿಟ್ಟು ಈಶಾನ್ಯ ಸಾರಿಗೆ ಮುಖ್ಯಸ್ಥರು ದರವನ್ನು ಮೊದಲಿನಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಜತೆಗೆ ಈ ದರವನ್ನೇ ಅನುಸರಿಸುವಂತೆ ಇತರೆ ವಿಭಾಗಗಳಿಗೂ ಪತ್ರ ಬರೆಯುವಂತೆ ಆದೇಶಿಸಿದ್ದಾರೆ. ಈ ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಿದೆ.

ADVERTISEMENT

‘ಈಶಾನ್ಯ ಸಾರಿಗೆ ಸಂಸ್ಥೆಯ ಹಲವು ಮಾರ್ಗಗಳಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ. ಇದರಿಂದ ಮಾಹಿತಿ ಇಲ್ಲದ ಪ್ರಯಾಣಿಕರ ಜತೆ ಜಗಳ ಸಾಮಾನ್ಯವಾಗಿದೆ’ ಎಂದು ನಿರ್ವಾಹಕರು ಬೇಸರ ವ್ಯಕ್ತಪಡಿಸುತ್ತಾರೆ.

ಈಶಾನ್ಯ ಸಾರಿಗೆ ಸಂಸ್ಥೆಯಲ್ಲಷ್ಟೇ ಅಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಹೊಸ ದರಕ್ಕೆ ಟಿಕೆಟ್‌ ನೀಡಲಾಗುತ್ತಿದೆ. ಈ ಕುರಿತ ಮಾಹಿತಿಗಾಗಿ ಬಳ್ಳಾರಿ ವಿಭಾಗೀಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಮಾಹಿತಿ ನೀಡಲು ನಿರಾಕರಿಸಿದರು.

‘ದರ ಕಡಿತದ ನಂತರ ಪ್ರಯಾಣಿಕರ ಸಂಖ್ಯೆ ಎಷ್ಟು ಹೆಚ್ಚಳವಾಗಿದೆ. ದರ ಹೆಚ್ಚಳ ಮಾಡಿದ ಮೂಲ ಉದ್ದೇಶ ಏನಾಯಿತು, ಆದಾಯ ಎಷ್ಟು ಏರಿಳಿತ ಕಂಡಿದೆ. ಲಾಭ–ನಷ್ಟ ಮಾಹಿತಿ ಬಹಿರಂಗ ಮಾಡದೇ ಏಕಾಏಕಿ ದರ ಹೆಚ್ಚಳ ಮಾಡಿರುವುದರ ಹಿಂದೆ ಖಾಸಗಿ ಬಸ್‌ಗಳ ಮಾಲೀಕರ ಅಮಿಷ ಇದೆ’ ಎಂದು ರೈತಸಂಘದ ಹಿರಿಯ ಮುಖಂಡ ಕೆ.ಪಿ. ಭೂತಯ್ಯ ಆರೋಪಿಸಿದರು.

‘ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದನ್ನು ನೋಡಿದ್ದೇನೆ. ಸಾರಿಗೆ ಸಂಸ್ಥೆ ಜನಪರವಾಗಿರಬೇಕು ಎನ್ನುವುದು ಸುಳ್ಳಾಗಿದೆ. ಕೂಡಲೇ ಪರಿಷ್ಕರಿಸಿ, ದರ ಇಳಿಕೆ ಮಾಡದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

**

ಬರಗಾಲ ಇರುವ ಈ ಭಾಗದಲ್ಲಿ ಟಿಕೆಟ್ ದರದ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತ ಸಂಸ್ಥೆ ಚೆಲ್ಲಾಟವಾಡುತ್ತಿದೆ. ದರ ಇಳಿಸದಿದ್ದರೆ ಪ್ರತಿಭಟನೆ ಅನಿವಾರ್ಯ
- ಡಿ.ಪೆನ್ನಯ್ಯ, ಸಹ ಕಾರ್ಯದರ್ಶಿ, ಸಿಪಿಐ

**

ಲಾಭ ತಂದು ಕೊಡುವ ಕಡೆ ಹಳೆ ಬಸ್‌ಗಳನ್ನು ಓಡಿಸುವುದು, ಬಸ್‌ಗಳನ್ನು ನೀಡದಿರುವುದನ್ನು ನೋಡಿದ್ದೇವೆ. ಇದಕ್ಕೆ ಮೊದಲು ಉತ್ತರ ನೀಡಲಿ.
– ಕೆ.ಪಿ. ಭೂತಯ್ಯ, ಹಿರಿಯ ರೈತಮುಖಂಡ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.