ADVERTISEMENT

ಬಸ್‌ ‍ಪ್ರಯಾಣ ದರ ಹೆಚ್ಚಳ ಜಾರಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 15:51 IST
Last Updated 4 ಜನವರಿ 2025, 15:51 IST
<div class="paragraphs"><p>ಕೆಎಸ್‌ಆರ್‌ಟಿಸಿ ಬಸ್‌ಗಳು</p></div>

ಕೆಎಸ್‌ಆರ್‌ಟಿಸಿ ಬಸ್‌ಗಳು

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬಸ್‌ ‍ಪ್ರಯಾಣ ದರವು ಏರಿಕೆ ಎಲ್ಲ ನಾಲ್ಕು ನಿಗಮಗಳಲ್ಲಿ ಶನಿವಾರ (ಜ.4) ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.

ADVERTISEMENT

ಬಸ್‌ಗಳ ಟಿಕೆಟ್‌ ದರವನ್ನು ಶೇ 15ರಷ್ಟು ಏರಿಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿತ್ತು. ಜ.4ರ ಮಧ್ಯರಾತ್ರಿ 12 ಗಂಟೆಯ ಬಳಿಕ (ಜ.5) ಹೊರಡುವ ಬಸ್‌ಗಳಿಗೆ ಅನ್ವಯವಾಗಲಿದೆ.

ಬೆಂಗಳೂರು ನಗರದಲ್ಲಿ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಉಳಿದವುಗಳಲ್ಲಿ ಕನಿಷ್ಠ ₹ 1 ಮತ್ತು ಗರಿಷ್ಠ ₹ 3 ಹೆಚ್ಚಳವಾಗಲಿದೆ. ಮೊದಲ ಸ್ಟೇಜ್‌ಗೆ ಸದ್ಯ ₹ 5 ದರ ಇದ್ದು, ಇನ್ನು ಮುಂದೆ ₹ 6 ಆಗಲಿದೆ. ಎರಡನೇ ಸ್ಟೇಜ್‌ನಿಂದ ದರ ಇದೇ ಮಾದರಿಯಲ್ಲಿ ಹೆಚ್ಚಾಗಲಿದೆ. ₹ 10 ಇದ್ದಿದ್ದು ₹ 12, ₹ 20 ಇದ್ದಿದ್ದು ₹ 23, ₹ 25 ಇದ್ದಿದ್ದು ₹ 28, ₹ 30 ಇದ್ದಿದ್ದು ₹ 32 ಆಗಲಿದೆ.

ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ಎಸ್‌ಆರ್‌ಟಿಸಿ (ಎನ್‌ಡಬ್ಲ್ಯುಆರ್‌ಟಿಸಿ), ಕಲ್ಯಾಣ ಕರ್ನಾಟಕ ಎಸ್‌ಆರ್‌ಟಿಸಿ (ಕೆಕೆಆರ್‌ಟಿಸಿ) ಬಸ್‌ಗಳಲ್ಲಿ ವಿವಿಧ ಜಿಲ್ಲಾ ಕೇಂದ್ರಗಳಿಗೆ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಕನಿಷ್ಠ ₹ 11 (ಹತ್ತಿರದ ಜಿಲ್ಲೆ), ಗರಿಷ್ಠ ₹ 115ರವರೆಗೆ (ದೂರದ ಜಿಲ್ಲೆ) ಹೆಚ್ಚಳವಾಗಲಿದೆ. ಇದೇ ಮಾದರಿಯಲ್ಲಿ ಪ್ರತಿಷ್ಠಿತ ಬಸ್‌ಗಳಲ್ಲಿ ಅವುಗಳ ಈಗಿನ ದರದಲ್ಲಿ ಶೇ 15 ಹೆಚ್ಚಳವಾಗಲಿದೆ.

ನಾಲ್ಕು ನಿಗಮಗಳಲ್ಲಿ ತಿಂಗಳ ವರಮಾನವು ₹ 1,052 ಕೋಟಿ ಇದ್ದು, ಬೆಲೆ ಏರಿಕೆಯಾದ ಬಳಿಕ ಪ್ರತಿ ತಿಂಗಳು ಹೆಚ್ಚುವರಿಯಾಗಿ ₹ 74.85 ಕೋಟಿ ಸಂಗ್ರಹವಾಗಲಿದೆ.

ಐಷಾರಾಮಿ ಬಸ್‌ಗಳಿಗೂ ಅನ್ವಯ

ಸಾಮಾನ್ಯ ವೇಗದೂತ ಬಸ್‌ಗಳ ಟಿಕೆಟ್‌ ದರ ಏರಿಕೆಯನ್ನು ಸರ್ಕಾರ ನಿರ್ಧರಿಸುತ್ತದೆ. ಪ್ರತಿಷ್ಠಿತ ಬಸ್‌ಗಳ ದರ ಏರಿಕೆಯನ್ನು ನಿಗಮಗಳ ಮಟ್ಟದಲ್ಲಿಯೇ ನಿರ್ಧಾರವಾಗುತ್ತದೆ. ಆದರೂ ಶೇ 15 ಬೆಲೆ ಏರಿಕೆ ಎಲ್ಲ ಬಸ್‌ಗಳಿಗೂ ಅನ್ವಯವಾಗಲಿದೆ. ‘ಐಷಾರಾಮಿ ಬಸ್‌ಗಳ ಟಿಕೆಟ್‌ ದರವನ್ನು ಹೆಚ್ಚಿಸದೇ ಐದು ವರ್ಷಗಳಾಗಿವೆ. ಹಾಗಾಗಿ ಅವುಗಳ ದರಗಳು ಸಾಮಾನ್ಯ ಬಸ್‌ಗಳ ಜೊತೆಗೇ ಆಗಲಿವೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.