ಬೆಂಗಳೂರು: ಜನಗಣತಿಯೊಂದಿಗೆ ಜಾತಿಗಣತಿಯನ್ನು ಸೇರ್ಪಡೆಗೊಳಿಸುವ ಮೂಲಕ ಸಾಮಾಜಿಕ ನ್ಯಾಯ ವಿತರಿಸುವ ನೈಜ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೋರಿಸಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಐದು ದಶಕಗಳಷ್ಟು ದೇಶವನ್ನು ಆಳಿದ ಕಾಂಗ್ರೆಸ್ ಎಂದೂ ಇಂತಹ ಸಾಮಾಜಿಕ ನ್ಯಾಯದ ಪರ ಬದ್ಧತೆಯನ್ನು ತೋರದೇ ಜಾತಿಗಣತಿಗಷ್ಟೇ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿತ್ತು. ಸಮಾಜದ ಶೋಷಿತರು, ಹಿಂದುಳಿದವರು, ಅತಿ ಹಿಂದುಳಿದವರ ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕ ಸ್ಥಿತಿಗತಿಗಳನ್ನು ಅರಿಯಲು ಜನಗಣತಿಯೊಂದಿಗೆ ಜಾತಿಗಣತಿಯನ್ನೂ ಸೇರ್ಪಡೆಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಮೂಲಕ ನಮ್ಮ ಸರ್ಕಾರ ಬದ್ಧತೆಯನ್ನು ಮೆರೆದಿದೆ’ ಎಂದರು.
‘ಇತ್ತೀಚಿಗೆ ಕರ್ನಾಟಕದಲ್ಲಿ ಜಾತಿ ಗಣತಿಯ ಹೆಸರಿನಲ್ಲಿ ವಿಪರೀತ ಗೊಂದಲ ಸೃಷ್ಟಿಸಿ ಅವೈಜ್ಞಾನಿಕ ಅಂಶಗಳಿಂದ ಕೂಡಿದ ವಾಸ್ತವಕ್ಕೆ ದೂರವಾದ ವರದಿಯನ್ನು ಬಿಡುಗಡೆ ಮಾಡಲು ಯತ್ನಿಸಿ ಸಮುದಾಯಗಳ ನಡುವೆ ಬಿರುಕು ಮೂಡಿಸುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಡಿತ್ತು’ ಎಂದು ಹೇಳಿದರು.
‘ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಸಾಮಾಜಿಕ ಸ್ಥಿತಿಗತಿ ಅದರಲ್ಲೂ ಜಾತಿ ಆಧಾರಿತ ಸ್ಥಿತಿ ಗತಿಗಳನ್ನು ಅಳೆಯಲು ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಸೇರಿಸುವ ಮೂಲಕ ಕಾಂಗ್ರೆಸ್ಸಿಗರ ಮತ ಬ್ಯಾಂಕ್ ರಾಜಕಾರಣಕ್ಕೆ ತಕ್ಕ ಉತ್ತರ ನೀಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಜಾತಿಗಣತಿಗೆ ಮುಂದಾಗಿರುವ ನಿರ್ಧಾರವನ್ನು ಬಸವ ಜಯಂತಿಯಂದೇ ಕೈಗೊಂಡಿರುವುದು ಸಾಮಾಜಿಕ ನ್ಯಾಯದ ಕ್ರಾಂತಿಗಾಗಿ ನ್ಯಾಯದ ಕಹಳೆ ಮೊಳಗಿಸಿದಂತಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.