
ಬೈರತಿ ಬಸವರಾಜ
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಅವರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆ.ಆರ್.ಪುರ ಕ್ಷೇತ್ರದ ಶಾಸಕ, ಪ್ರಕರಣದ ಐದನೇ ಆರೋಪಿ ಬೈರತಿ ಬಸವರಾಜ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಂಡುಬಂದಿದ್ದು, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ 42ನೇ ಎಸಿಜೆಎಂ ನ್ಯಾಯಾಲಯ ಶುಕ್ರವಾರ ಸಿಐಡಿ ಪೊಲೀಸರಿಗೆ ಸೂಚಿಸಿತು.
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರಲ್ಲಿ ಗುರುವಾರ ರಾತ್ರಿ, ಬೈರತಿ ಅವರನ್ನು ಪೊಲೀಸರು ಬಂಧಿಸಿ ಸಿಐಡಿ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಸಿಐಡಿ ಕಚೇರಿಯಲ್ಲೇ ಗುರುವಾರ ರಾತ್ರಿ ಅವರನ್ನು ವಿಚಾರಣೆ ನಡೆಸಿ ಸಿಐಡಿ ಪೊಲೀಸರು, ಶುಕ್ರವಾರ ಮಧ್ಯಾಹ್ನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಬಳಿಕ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದ್ದು 14 ಸಿಐಡಿ ಕಸ್ಟಡಿಗೆ ನೀಡುವಂತೆ ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ಇದೇ ವೇಳೆ ಆರೋಪಿ ಪರ ವಕೀಲರು, ಬೌರಿಂಗ್ ಆಸ್ಪತ್ರೆಯಲ್ಲಿ ಬೈರತಿ ಬಸವರಾಜ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಹೃದಯ ಸಂಬಂಧಿ ಸಮಸ್ಯೆ ಪತ್ತೆಯಾಗಿದೆ. ವೈದ್ಯರು ನೀಡಿರುವ ವರದಿಯಲ್ಲೂ ಆ ಅಂಶ ಉಲ್ಲೇಖಿಸಿದ್ದಾರೆ. ಅವರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಕೋರಿದರು.
ಜಯದೇವ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿ ವರದಿ ಸಹಿತ ಆರೋಪಿಯನ್ನು ಶನಿವಾರ ಹಾಜರು ಪಡಿಸುವಂತೆ ನ್ಯಾಯಾಧೀಶರು ಸೂಚಿಸಿದರು.
ನ್ಯಾಯಾಲಯಕ್ಕೆ ಶನಿವಾರ ರಜೆಯಿರುವ ಕಾರಣಕ್ಕೆ ಆರೋಪಿಯನ್ನು ನ್ಯಾಯಾಧೀಶರ ಮನೆಗೆ ಹಾಜರು ಪಡಿಸುವ ಸಾಧ್ಯತೆಯಿದೆ.
2025ರ ಜುಲೈ15ರಂದು ಬಿಕ್ಲು ಶಿವು ಅವರ ಕೊಲೆ ನಡೆದಿತ್ತು. ಆ ಕೊಲೆ ಪ್ರಕರಣದಲ್ಲಿ ಬೈರತಿ ಅವರು ಐದನೇ ಆರೋಪಿ ಆಗಿದ್ದಾರೆ. ಶಿವು ಅವರ ತಾಯಿ ನೀಡಿದ ದೂರಿನ ಮೇರೆಗೆ ಸಿಐಡಿ ತನಿಖೆ ನಡೆಯುತ್ತಿದೆ.
‘ಡಿಐಎಸ್‌ಪಿ ಗೌತಮ್ ಅವರ ನೇತೃತ್ವದಲ್ಲಿ ಆರೋಪಿಯ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಮೊದಲ ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಜತೆಗೆ ಹೊರ ರಾಜ್ಯಕ್ಕೆ ತೆರಳಿರುವ ವಿಡಿಯೊ ಹಾಗೂ ಫೋಟೊಗಳನ್ನು ಬೈರತಿ ಅವರಿಗೆ ತೋರಿಸಿ ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ. ಜಗ್ಗ ಅವರ ಜತೆಗೆ ನಡೆದ ಫೋನ್ ಸಂಭಾಷಣೆಗಳ ಬಗ್ಗೆಯೂ ಪ್ರಶ್ನೆ ಕೇಳಿ ಹೇಳಿಕೆ ದಾಖಲು ಮಾಡಲಾಗಿದೆ. ನ್ಯಾಯಾಧೀಶರ ಎದುರು ಆರೋಪಿಯನ್ನು ಶನಿವಾರ ಹಾಜರು ಪಡಿಸಿ, 14 ದಿನ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಾಗುವುದು’ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.