ADVERTISEMENT

ಸಿಎಎ, ಎನ್‌ಆರ್‌ಸಿ ಹೋರಾಟ ಸ್ಥಗಿತ: ಸಿ.ಎಂ.ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 14:24 IST
Last Updated 14 ಮಾರ್ಚ್ 2020, 14:24 IST
ಸಿ.ಎಂ.ಇಬ್ರಾಹಿಂ
ಸಿ.ಎಂ.ಇಬ್ರಾಹಿಂ   

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಜಾರಿ ವಿರೋಧಿಸಿ ನಿರಂತವಾಗಿ ನಡೆಸಲಾಗುತ್ತಿರುವ ಹೋರಾಟವನ್ನು, ಕೊರೊನಾ ಸೋಂಕು ವ್ಯಾಪ್ತಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಗತಗೊಳಿಸುತ್ತಿರುವುದಾಗಿ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರೋಧಿಸಿ ಹೋರಾಟ ನಡೆಸುವ ಬದಲು ಮಾತುಕತೆ ಮೂಲಕ ಬಗೆಹರಿಸಲುಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರದಿಂದ ಸ್ಪಂದನೆ

ADVERTISEMENT

‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಲೋಪ, ದೋಷಗಳ ಕುರಿತು ಒಂದು ತಿಂಗಳ ಹಿಂದೆ ಪ್ರಧಾನಿ ಮೋದಿ ಅವರಿಗೆ ದೀರ್ಘ ಪತ್ರ ಬರೆದಿದ್ದೆ. ಇದಕ್ಕೆ ಸ್ಪಂದಿಸಿ ಪ್ರಧಾನಿ ಕಚೇರಿಯಿಂದ ಮಾತುಕತೆಗೆ ಆಹ್ವಾನ ಬಂದಿತ್ತು. ಮೂರು ದಿನಗಳ ಹಿಂದೆ ಸಚಿವ ಜಿತೇಂದ್ರ ಸಿಂಗ್‌ ಅವರು ಈ ಸಂಬಂಧ ನನ್ನ ನೇತೃತ್ವದ ನಿಯೋಗದೊಂದಿಗೆ ಸುದೀರ್ಘವಾಗಿ ಚರ್ಚಿಸಿ, ಅಭಿಪ್ರಾಯ ಪಡೆದುಕೊಂಡಿದ್ದಾರೆ. ನಮ್ಮ ಆಕ್ಷೇಪಣೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಸುತ್ತೋಲೆ ಹೊರಡಿಸಿ

‘ಎನ್‌ಆರ್‌ಸಿಗೆ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿರುವುದು ಸ್ವಾಗತಾರ್ಹ. ಆದರೆ, ಈ ಸಂಬಂಧ ಅಧಿಕೃತವಾಗಿ ಸುತ್ತೋಲೆ ಹೊರಡಿಸಬೇಕು’ ಎಂದು ಇಬ್ರಾಹಿಂ ಆಗ್ರಹಿಸಿದರು.

ಸಲಹೆ ಪಡೆಯಲು ಮನವಿ

ದಿನದಿಂದ ದಿನಕ್ಕೆ ಕುಸಿಯುತ್ತಿರುವ ದೇಶದ ಅರ್ಥ ವ್ಯವಸ್ಥೆ ಸರಿಪಡಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರನ್ನು ಒಳಗೊಂಡ ಸಮಿತಿ ರಚಿಸಿ, ಅವರ ಸಲಹೆ ಪಡೆಯಬೇಕು ಎಂದು ಮನವಿ ಮಾಡಿದರು.

ಎರಡೂ ಪಕ್ಷ ಲಾಯಕ್ಕಿಲ್ಲ

‘ಬಿಜೆಪಿಯವರು ಆಡಳಿತ ನಡೆಸಲು ಲಾಯಕ್ಕಿಲ್ಲ; ಅದೇ ರೀತಿ, ಕಾಂಗ್ರೆಸ್‌ನವರು ಸಮರ್ಥ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಲು ಲಾಯಕ್ಕಿಲ್ಲ’ ಎಂದು ಇಬ್ರಾಹಿಂ ಅಭಿಪ್ರಾಯಪಟ್ಟರು.

ಬಿಎಸ್‌ವೈಗೆ ಪ್ರಸ್ತ ಆಗಿಲ್ಲ

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ ‘ಮದುವೆ ಆಗಿದೆ. ಆದರೆ, ಪ್ರಸ್ತ ಆಗಿಲ್ಲ’ ಎಂಬಂತಾಗಿದೆ. ಸುಗಮವಾಗಿ ಆಡಳಿತ ನಡೆಸಲು ಆಗದ ಪರಿಸ್ಥಿತಿಯಲ್ಲಿ ಅವರಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.