ADVERTISEMENT

ಮುಖ್ಯಮಂತ್ರಿ ಬದಲಾವಣೆ ವಿಚಾರ: ಬಿಜೆಪಿಯಲ್ಲಿ ಇಬ್ಬಣಗಳ ಚಟುವಟಿಕೆ ಬಿರುಸು

ಅರುಣ್‌ ಸಿಂಗ್‌ ಭೇಟಿ ವೇಳೆ ಮೇಲುಗೈ ಸಾಧಿಸುವ ತವಕ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 1:24 IST
Last Updated 14 ಜೂನ್ 2021, 1:24 IST
   

ಬೆಂಗಳೂರು: ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಭೇಟಿ ನಿಗದಿಯಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರ ಮತ್ತು ವಿರೋಧಿ ಬಣಗಳ ಚಟುವಟಿಕೆ ಮತ್ತಷ್ಟು ಬಿರುಸಾಗಿದೆ.

ಇದೇ 16 ರಂದು ಅರುಣ್‌ ಸಿಂಗ್‌ ಬೆಂಗಳೂರಿಗೆ ಭೇಟಿ ನೀಡುವುದು ಶನಿವಾರವಷ್ಟೇ ಅಧಿಕೃತಗೊಂಡಿತ್ತು. ಈ ಮಾಹಿತಿ ಹೊರಬೀಳುತ್ತಿದ್ದಂತೆ ಯಡಿಯೂರಪ್ಪ ಬೆಂಬಲಿಗರು ಮತ್ತು ವಿರೋಧಿ ಪಾಳೆಯದ ಪ್ರಮುಖರು ಅಹವಾಲುಗಳನ್ನು ಸಲ್ಲಿಸಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.

16 ರಂದು ಪಕ್ಷದ ಕಚೇರಿಯಲ್ಲಿ ಸಚಿವರ ಸಭೆ ನಡೆಸಲಿರುವ ಅರುಣ್‌ ಸಿಂಗ್‌, 17 ರಂದು ಶಾಸಕರ ಸಭೆ ಮತ್ತು ಜೂನ್‌ 18 ರಂದು ಪಕ್ಷದ ಪ್ರಮುಖರ ಸಮಿತಿ ಸಭೆ ನಡೆಸುವ ಸಾಧ್ಯತೆ ಇದೆ. ಈ ಎಲ್ಲ ಸಂದರ್ಭಗಳಲ್ಲಿ ನಾಯಕತ್ವ ಬದಲಾವಣೆಯ ವಿಚಾರವನ್ನು ಮುನ್ನೆಲೆಗೆ ತರಲು ಸಚಿವ ಸಿ.ಪಿ. ಯೋಗೇಶ್ವರ್‌, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಗುಂಪು ಸಿದ್ಧತೆ ನಡೆಸಿದೆ.

ADVERTISEMENT

ದೆಹಲಿಯಲ್ಲಿರುವ ಶಾಸಕ ಅರವಿಂದ ಬೆಲ್ಲದ ಬೆಂಗಳೂರಿಗೆ ವಾಪಸಾದ ಬಳಿಕ ಈ ಪ್ರಕ್ರಿಯೆ ಮತ್ತಷ್ಟು ಚುರುಕಾಗಲಿದೆ ಎಂದು ಗೊತ್ತಾಗಿದೆ.ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಚರ್ಚೆಗೆ ಸಭೆಗಳನ್ನು ಸೀಮಿತಗೊಳಿಸುವ ಮೂಲಕ ಭಿನ್ನಮತೀಯರ ಗುಂಪಿನ ಪ್ರಯತ್ನವನ್ನು ವಿಫಲಗೊಳಿಸಲು ಯಡಿಯೂರಪ್ಪ ಬೆಂಬಲಿಗರು ಪ್ರತಿತಂತ್ರ ರೂಪಿಸುತ್ತಿದ್ದಾರೆ. ಇದಕ್ಕಾಗಿಯೇ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರ ಸಹಿ ಸಂಗ್ರಹ ಚಟುವಟಿಕೆಯೂ ಮುಂದುವರಿದಿದೆ.

ಶಾಸಕಾಂಗ ಪಕ್ಷದ ಸಭೆಗೆ ಒತ್ತಡ: ಎಲ್ಲ ಶಾಸಕರ ಅಹವಾಲು, ಅಭಿಪ್ರಾಯ ಆಲಿಸುವುದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒಂದು ಗುಂಪು ಒತ್ತಡ ಹೇರುತ್ತಿದೆ. ಆದರೆ, ಅರುಣ್‌ ಸಿಂಗ್‌ ಶಾಸಕಾಂಗ ಪಕ್ಷದ ಸಭೆಯ ಬದಲಿಗೆ ಪಕ್ಷದ ಕಚೇರಿಯಲ್ಲೇ ಶಾಸಕರ ಸಭೆ ನಡೆಸುವುದಕ್ಕೆ ಒಲವು ತೋರಿದ್ದಾರೆ. ಈ ಬೆಳವಣಿಗೆಯಿಂದ ಕೆಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಶಾಸಕಾಂಗ ಪಕ್ಷದ ಸಭೆ ನಡೆಸಲು ಉಸ್ತುವಾರಿಗೆ ಸೂಚಿಸುವಂತೆ ವರಿಷ್ಠರ ಮೇಲೆ ಒತ್ತಡ ತರುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

‘ಸಭೆಗೆ ಸಂಪೂರ್ಣ ಸಹಕಾರ’: ಶಿವಮೊಗ್ಗ ಮತ್ತು ಹಾಸನ ಜಿಲ್ಲಾ ಪ್ರವಾಸ ಮುಗಿಸಿ ಭಾನುವಾರ ಸಂಜೆ ಬೆಂಗಳೂರಿಗೆ ಹಿಂತಿರುಗಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಪಕ್ಷದ ಉಸ್ತುವಾರಿಯಾಗಿ ಪಕ್ಷ ಸಂಘಟನೆ, ಅಭಿವೃದ್ಧಿ ಕಾರ್ಯಗಳ ಕುರಿತು ಸಮಾಲೋಚಿಸಿ ಮಾಹಿತಿ ಪಡೆಯುವುದು ಅರುಣ್‌ ಸಿಂಗ್‌ ಅವರ ಜವಾಬ್ದಾರಿ. ಅದಕ್ಕಾಗಿ ಅವರು ಬರುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.