ADVERTISEMENT

ಅಪಘಾತ: ಮೃತರ ಸಂಬಂಧಿಕರಿಗೆ ತಲಾ ‌₹2.5 ಲಕ್ಷ ಪರಿಹಾರ ನೀಡಲು ಒಪ್ಪಿದ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 1:33 IST
Last Updated 28 ಫೆಬ್ರುವರಿ 2019, 1:33 IST
ಎಎಸ್‌ಪಿ ಬಲರಾಮೇಗೌಡ ನಿವಾಸದಿಂದ ಹೊರ ಬರುತ್ತಿರುವ ಶಾಸಕ ಸಿ.ಟಿ.ರವಿ
ಎಎಸ್‌ಪಿ ಬಲರಾಮೇಗೌಡ ನಿವಾಸದಿಂದ ಹೊರ ಬರುತ್ತಿರುವ ಶಾಸಕ ಸಿ.ಟಿ.ರವಿ   

ಮಂಡ್ಯ:ಕುಣಿಗಲ್‌ ಸಮೀಪ ನಡೆದ ಶಾಸಕ ಸಿ.ಟಿ.ರವಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎ.ಆರ್‌.ಬಲರಾಮೇಗೌಡ ನಿವಾಸದಲ್ಲಿ ಬುಧವಾರ ಸಿ.ಟಿ.ರವಿ ಹಾಗೂ ಮೃತ ಯುವಕರ ಸಂಬಂಧಿಕರ ನಡುವೆ ಸಂಧಾನ ಸಭೆ ನಡೆಯಿತು.

ಫೆ. 19ರಂದು ನಸುಕಿನಲ್ಲಿ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಕನಕಪುರ ತಾಲ್ಲೂಕಿನ ಸೂರನಹಳ್ಳಿ ಗ್ರಾಮದ ಶಶಿಕುಮಾರ್, ಸುನಿಲ್ ಗೌಡ ಮೃತಪಟ್ಟಿದ್ದರು.

ಮೃತಪಟ್ಟವರು ಎಎಸ್‌ಪಿ ಬಲರಾಮೇಗೌಡ ಸಂಬಂಧಿಕರಾದ ಕಾರಣ ಅವರ ನಿವಾಸದಲ್ಲಿ ಸಂಧಾನ ಸಭೆ ನಡೆಯಿತು. ಮೃತ ಯುವಕರ ಸಂಬಂಧಿಕರಿಗೆ ತಲಾ ₹ 2.5 ಲಕ್ಷ ಪರಿಹಾರ ನೀಡಲು ಸಿ.ಟಿ.ರವಿ ಒಪ್ಪಿದರು. ಕುಟುಂಬ ಸದಸ್ಯರು ಪರಿಹಾರ ಚೆಕ್‌ ಸ್ವೀಕರಿಸಿದ್ದಾರೆ.

ADVERTISEMENT

‘ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ತಕ್ಷಣ ಮೃತರ ಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಮೃತರನ್ನು ತಂದು ಕೊಡುವ ಶಕ್ತಿ ಇಲ್ಲ. ಅವರ ಕುಟುಂಬದವರಿಗೆ ನೆರವಾಗುವುದಾಗಿ ಹಿಂದೆಯೇ ತಿಳಿಸಿದ್ದೆ. ಅದರಂತೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಕೋರ್ಟ್‌ನಲ್ಲಿ ಪ್ರಕರಣ ಮುಂದುವರಿಯುತ್ತದೆ. ಕೇಸ್‌ ವಾಪಸ್‌ ಪಡೆಯುವ ಬಗ್ಗೆ ಚರ್ಚೆಮಾಡಿಲ್ಲ’ ಎಂದು ಸಿ.ಟಿ.ರವಿ ತಿಳಿಸಿದರು.

‘ನಮ್ಮ ಊರಿಗೆ ಬಂದು ಮಾತನಾಡಲು ಸಿ.ಟಿ.ರವಿ ಅವರಿಗೆ ಭಯ. ಹಣ ಪಡೆಯಲು ನಾವು ಇಲ್ಲಿಗೆ ಬಂದಿಲ್ಲ. ಬಲರಾಮೇಗೌಡರು ನಮ್ಮ ಊರಿನವರು. ಅವರ ಮೇಲಿನ ಗೌರವದಿಂದ ಇಲ್ಲಿಗೆ ಬಂದಿದ್ದೇವೆ. ಬಲವಂತಮಾಡಿ ಹಣ ಕೊಟ್ಟಿದ್ದಾರೆ. ಯಾರು ಎಷ್ಟೇ ಹಣ ಕೊಟ್ಟರೂ ನಮ್ಮ ಹುಡುಗರನ್ನು ವಾಪಸ್‌ ಕರೆತರಲು ಸಾಧ್ಯವಿಲ್ಲ’ ಎಂದು ಮೃತ ಶಶಿಕುಮಾರ್‌ ತಂದೆ ಜಯರಾಮು ಕಣ್ಣು ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.