ADVERTISEMENT

‘ಸಿ–ವಿಜಿಲ್‌’ಗೆ ಸುಳ್ಳು ದೂರು ನೀಡಿದರೆ ಹುಷಾರ್‌

ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲು ಮೊಬೈಲ್‌ ಆ್ಯಪ್‌– ಸಿಇಒ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 20:09 IST
Last Updated 15 ಮಾರ್ಚ್ 2019, 20:09 IST

ಬೆಂಗಳೂರು: ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲು ಆರಂಭಿಸಿರುವ ‘ಸಿ–ವಿಜಿಲ್‌’ ಮೊಬೈಲ್‌ ಆ್ಯಪ್‌ಗೆ ಈವರೆಗೆ 186 ದೂರುಗಳು ಬಂದಿದ್ದು, ಈ ಪೈಕಿ, 111 ಸುಳ್ಳು ದೂರುಗಳು. ಈ ಆ್ಯಪ್‌ಗೆ ಸೆಲ್ಫಿ ಕಳುಹಿಸಿದವರೂ ಇದ್ದಾರೆ’ ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದರು.

ಆ್ಯಪ್‌ ಬಿಡುಗಡೆ ಮಾಡಿ ಶುಕ್ರವಾರ ಮಾತನಾಡಿದ ಅವರು, ‘45 ದೂರುಗಳನ್ನು ವಿಲೇವಾರಿ ಮಾಡ
ಲಾಗಿದೆ. 30 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಸುಳ್ಳು ದೂರು ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

‘ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವ ಪ್ರಕ್ರಿಯೆಯಲ್ಲಿ 330 ಅಧಿಕಾರಿಗಳು, 7,475 ಫೀಲ್ಡ್‌ ಯೂನಿಟ್‌ಗಳು ಹಾಗೂ 10,489 ಸಿಬ್ಬಂದಿ ನೇರವಾಗಿ ಭಾಗಿಯಾಗಿದ್ದಾರೆ. ಸುಳ್ಳು ದೂರು ನೀಡಿದರೆ ವಿಚಾರಣೆ ಹೆಸರಿನಲ್ಲಿ ಅವರ ಸಮಯ ವ್ಯರ್ಥವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ನೀತಿಸಂಹಿತೆ ಉಲ್ಲಂಘನೆ ಬಗ್ಗೆ ದೂರು ನೀಡಲು ನಾಗರಿಕರು ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಗೆ ಹೋಗಬೇಕಿಲ್ಲ. ನಾಗರಿಕರು ಸಿ–ವಿಜಿಲ್‌ ಮೊಬೈಲ್‌ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ದೂರಿನ ಜತೆಗೆ ಅದಕ್ಕೆ ಸಂಬಂಧಿಸಿದ ವಿಡಿಯೊ ಹಾಗೂ ಛಾಯಾಚಿತ್ರಗಳನ್ನು ಸಹ ಅಪ್‌ಲೋಡ್‌ ಮಾಡಬಹುದು’ ಎಂದು ಅವರು ತಿಳಿಸಿದರು.

‘ಒಮ್ಮೆ ದೂರು ದಾಖಲಾದ ತಕ್ಷಣ ಯುನಿಕ್‌ ಐಡಿ ಸಂಖ್ಯೆ ಜನರೇಟ್‌ ಆಗುತ್ತದೆ. ಈ ಸಂಖ್ಯೆಯ ಆಧಾರದಲ್ಲಿ ದೂರುದಾರರು ದೂರಿನ ಸ್ಥಿತಿಗತಿಯನ್ನು ಪತ್ತೆ ಹಚ್ಚಬಹುದು. ದೂರು ದಾಖಲಾದ ಕೂಡಲೇ ತನಿಖೆಗಾಗಿ ಸಂಚಾರಿ ದಳವನ್ನು ಕಳುಹಿಸುತ್ತೇವೆ. 100 ನಿಮಿಷಗಳಲ್ಲಿ ದೂರು ವಿಲೇವಾರಿ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

₹ 8.53 ಕೋಟಿಯ ಮದ್ಯ ವಶ: ಕಳೆದ 24 ಗಂಟೆಗಳಲ್ಲಿ ಸಂಚಾರಿ ತಂಡಗಳು ₹ 20 ಲಕ್ಷ ನಗದು, ₹ 6.35 ಲಕ್ಷ ಮೌಲ್ಯದ 650 ಗ್ರಾಂ ಚಿನ್ನ ಹಾಗೂ 10 ಕೆ.ಜಿ.ಬೆಳ್ಳಿ ವಶಪಡಿಸಿಕೊಂಡಿವೆ. ಒಟ್ಟಾರೆಯಾಗಿ ಇಲ್ಲಿಯವರೆಗೆ ₹ 54 ಲಕ್ಷ ನಗದು, ₹18.17 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ, ₹ 77 ಲಕ್ಷ ಮೌಲ್ಯದ ಗೃಹೋಪಯೋಗಿ ಉಪಕರಣಗಳನ್ನು ವಶಪಡಿಸಿಕೊಂಡಿವೆ. 1.84 ಲಕ್ಷ ಲೀಟರ್‌ನಷ್ಟು ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ₹ 8.53 ಕೋಟಿ’ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.