ADVERTISEMENT

ಕೆಪಿಎಸ್‌ಸಿ: ರಿಕ್ತ ಹುದ್ದೆಗಳಿನ್ನು ಹೊಸ ಹುದ್ದೆ

ಗೆಜೆಟೆಡ್‌ ಪ್ರೊಬೇಷನರ್‌ಗಳ ನೇಮಕಾತಿ ನಿಯಮಕ್ಕೆ ತಿದ್ದುಪಡಿ l ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 30 ಮೇ 2022, 19:31 IST
Last Updated 30 ಮೇ 2022, 19:31 IST

ಬೆಂಗಳೂರು: ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರುಗಳ ‘ಎ’ ಮತ್ತು ‘ಬಿ’ ಗ್ರೂಪ್‌ ಹುದ್ದೆಗಳಿಗೆ ನೇಮಕಾತಿ ಆದೇಶ ಪಡೆದ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದೇ ಹುದ್ದೆಗಳು ಖಾಲಿ ಉಳಿದರೆ ಅವುಗಳನ್ನು ಹೊಸ ಖಾಲಿ ಹುದ್ದೆಗಳು ಎಂದು ಪರಿಗಣಿಸಲಾಗುವುದು ಮತ್ತು ಮುಂದಿನ ನೇಮಕಾತಿಯಲ್ಲಿ ಅಂತಹ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಸಂಬಂಧ ಸೋಮವಾರ ನಡೆದ ಸಚಿವ ಸಂಪುಟ ಸಭೆ ‘ಕರ್ನಾಟಕ ಗೆಜೆ ಟೆಡ್‌ ಪ್ರೊಬೆಷನರುಗಳ ನೇಮಕಾತಿ(ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು’, 1997 ನಿಯಮಕ್ಕೆ 11 ಕ್ಕೆ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಗೆಜೆಟೆಡ್‌ ಪ್ರೊಬೇಷನರ್ಸ್‌ ಪರೀಕ್ಷೆಯ ಪ್ರಕ್ರಿಯೆ ಮುಗಿದ ನಂತರ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಹುದ್ದೆಗಳಿಗೆ ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಕಾರಣಾಂತರಗಳಿಂದ ತಾವು ಆಯ್ಕೆಯಾದ ಹುದ್ದೆಗೆ
ವರದಿ ಮಾಡಿಕೊಳ್ಳುವುದಿಲ್ಲ. ಆದರೆ, ಅದೇ ನೇಮಕಾತಿಯಲ್ಲಿ ಬೇರೆ
ಹುದ್ದೆಗೆ ಆಯ್ಕೆಯಾದ ಅಥವಾ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯದೆ ಇರುವ ಇತರೆ ಅಭ್ಯರ್ಥಿಗಳು ವರದಿ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳ ಹುದ್ದೆಗೆ ತಮ್ಮನ್ನು ಪರಿಗಣಿಸಬೇಕೆಂದು ನ್ಯಾಯಾಲಯಕ್ಕೆ ಮೊರೆ ಹೋಗುತ್ತಿದ್ದಾರೆ. ವರದಿ ಮಾಡಿಕೊಳ್ಳದೇ ಇರುವ ರಿಕ್ತ
ಸ್ಥಾನಗಳಿಗೆ ಅಂತಹವರನ್ನು ಪರಿಗಣಿಸಿದರೆ, ಇಡೀ ಆಯ್ಕೆ ಪಟ್ಟಿಯೇ ಬದಲಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ತಿದ್ದುಪಡಿಗೆ ಸಂಪುಟ ಒಪ್ಪಿಗೆ ನೀಡಿದೆ.

ADVERTISEMENT

ಈ ತಿದ್ದುಪಡಿಗೆ ಸಂಬಂಧಿಸಿದಂತೆ 15 ದಿನಗಳ ಒಳಗೆ ಆಕ್ಷೇಪಣೆ ಆಹ್ವಾ ನಿಸಲು ನಿರ್ಧರಿಸಲಾಗಿದೆ. ಅಷ್ಟರೊಳಗೆ ಯಾವುದೇ ಆಕ್ಷೇಪಣೆ, ಸಲಹೆಗಳು ಸ್ವೀಕೃತವಾಗದೇ ಇದ್ದರೆ, ಪುನಃ ಸಚಿವ ಸಂಪುಟದ ಅನುಮೋದನೆಗೆ ಮಂಡಿಸದೇ ಅಂತಿಮವಾಗಿ ಪ್ರಕಟಿಸಲು ತೀರ್ಮಾನಿಸಲಾಗಿದೆ.

ಸಂಪುಟದ ಇತರ ತೀರ್ಮಾನಗಳು:

l ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕು ಬನ್ನೂರಿನ ಆನೆಮಜಲು ಎಂಬಲ್ಲಿ 2 ನೇ ಹಂತದ ನ್ಯಾಯಾಲಯ ಸಂಕೀರ್ಣ ಕಾಮಗಾರಿಯನ್ನು ₹26.90 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ.

lಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ಚಿಕ್ಕಮಾದಿನಾಳ್‌ ಹಾಗೂ ಇತರೆ 11 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಒಟ್ಟು ಮೊತ್ತ ₹18.85 ಕೋಟಿ ಅನುದಾನ ನೀಡಲು ಒಪ್ಪಿಗೆ.

l2022–23ನೇ ಸಾಲಿನಲ್ಲಿ ‘ಶ್ರವಣದೋಷ ಮುಕ್ತ ಕರ್ನಾಟಕ ಯೋಜನೆ ಯೋಜನೆ’ ಅನುಷ್ಠಾನಕ್ಕಾಗಿ ಶ್ರವಣ ದೋಷ ಫಲಾನುಭವಿಗಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಶಸ್ತ್ರಚಿಕಿತ್ಸಾ ಸೇವೆಗಳು ಮತ್ತು ಶ್ರವಣಯಂತ್ರ ಸಾಧನಗಳನ್ನು ಒದಗಿಸಲು ಹಾಗೂ ಶಸ್ತ್ರಚಿಕಿತ್ಸೆಯನ್ನು ನೀಡಲು ಆಡಳಿತಾತ್ಮಕ ಅನುಮೋದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.