₹441 ಕೋಟಿ ವೆಚ್ಚದಲ್ಲಿ 63 ಅಂಬೇಡ್ಕರ್ ವಿದ್ಯಾರ್ಥಿ ನಿಲಯ: ಸಚಿವ ಸಂಪುಟ ನಿರ್ಧಾರ
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ 63 ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯಗಳಿಗೆ ₹441 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು. ಮೆಟ್ರಿಕ್ ಪೂರ್ವ 32 ಮತ್ತು ಮೆಟ್ರಿಕ್ ನಂತರದ 31 ವಿದ್ಯಾರ್ಥಿನಿಲಯಗಳಿಗೆ ಕಟ್ಟಡ ನಿರ್ಮಿಸಲಾಗುವುದು. ಇದಕ್ಕಾಗಿ ಕೆಟಿಪಿಪಿ ಅಡಿ ಸದ್ಯವೇ ಟೆಂಡರ್ ಕರೆಯಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದ 306 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ರಾಷ್ಟ್ರೀಯ ಕೌಶಲ ಯೋಜನೆಯಡಿ 306 ವೃತ್ತಿ ತರಬೇತಿದಾರರು ಮತ್ತು 10 ಜನ ವೃತ್ತಿ ಸಂಯೋಜಕರನ್ನು ನಿಯೋಜಿಸಲಾಗುವುದು. ಇದಕ್ಕಾಗಿ ₹15.30 ಕೋಟಿ ವೆಚ್ಚ ಮಾಡಲಾಗುವುದು
₹79.80 ಕೋಟಿ ವೆಚ್ಚದಲ್ಲಿ ಸೆಮಿಕಂಡಕ್ಟರ್ ಫ್ಯೂಚರ್ ಆಕ್ಸಿಲರೇಟರ್ ಲ್ಯಾಬ್ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ₹50.33 ಕೋಟಿ ನೀಡಲಿದೆ. ಉಳಿದ ಮೊತ್ತ ಕೇಂದ್ರ ಸರ್ಕಾರ ನೀಡಲಿದ್ದು, 5 ವರ್ಷಗಳ ಅವಧಿಯಲ್ಲಿ ಕಾರ್ಯಗತಗೊಳ್ಳಲಿದೆ
ವಿಜಯಪುರದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ವಿಜಯಪುರ ಕಿರು ತಾರಾಲಯ ಯೋಜನೆಯ ಪರಿಷ್ಕೃತ ಕಾಮಗಾರಿ ₹12.88 ಕೋಟಿಗೆ ಒಪ್ಪಿಗೆ
ಬಾಣಾವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಸಮ್ಮತಿ
ಕೇಂದ್ರ ಪುರಸ್ಕೃತ ‘ಪ್ರಸಾದ್ 2.0 ’ ಯೋಜನೆಯಡಿ ಸವದತ್ತಿ ಯಲ್ಲಮ್ಮ ದೇವಸ್ಥಾನವನ್ನು ₹18.37 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ, ಮೈಸೂರು ಚಾಮುಂಡೇಶ್ವರಿ ಕ್ಷೇತ್ರವನ್ನು ₹61.99 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ, ಬೀದರ್‌ನ ಶ್ರೀಪಾಪನಾಶ ದೇವಸ್ಥಾನವನ್ನು ₹22.41 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಅನುಮತಿ.
ವಸತಿರಹಿತ ಮೀನುಗಾರರಿಗೆ ರಾಷ್ಟ್ರೀಯ ಮೀನುಗಾರಿಕೆ ಕಲ್ಯಾಣ ಯೋಜನೆಯಡಿ ಮೀನುಗಾರರ ಮಾದರಿ ಗ್ರಾಮಗಳ ಅಭಿವೃದ್ಧಿಗಾಗಿ 10 ಸಾವಿರ ಮನೆಗಳನ್ನು ಮಂಜೂರು ಮಾಡಲು ಒಪ್ಪಿಗೆ
ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಪದೇ ಪದೇ ವೆಚ್ಚ ಪರಿಷ್ಕರಣೆ ಆಗುತ್ತಿರುವ ಬಗ್ಗೆ ನಿವೃತ್ತ ಅಭಿಯಂತರ ಗುರುಪ್ರಸಾದ್ ಅವರು ಸಲ್ಲಿಸಿರುವ ವರದಿಯ ಶಿಫಾರಸುಗಳ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಸಚಿವರ ಜತೆ ಚರ್ಚಿಸಿ ಮುಂದಿನ ಸಂಪುಟಕ್ಕೆ ಮಾಹಿತಿ ನೀಡಲು ಸೂಚಿಸಲಾಯಿತು
ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣವನ್ನು ₹20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮತಿ
ಚಿಂತಾಮಣಿ ಮುರಗಮಲ್ಲ ಗ್ರಾಮದ ಹಜರತ್ ಫಖೀ–ಷಾ–ವಲಿ ದರ್ಗಾ ಅಭಿವೃದ್ಧಿಗೆ ₹31.99 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.