ADVERTISEMENT

ಕೊನೆಗೂ ಸಂಪುಟ ವಿಸ್ತರಣೆ

ಬಂಡಾಯ ಶಮನಕ್ಕೆ ಯತ್ನ: ಇಂದು ಪ್ರಮಾಣ ವಚನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 19:45 IST
Last Updated 21 ಡಿಸೆಂಬರ್ 2018, 19:45 IST
   

ನವದೆಹಲಿ: ಕಳೆದ ನಾಲ್ಕು ತಿಂಗಳಿಂದ ಮುಂದುವರಿದಿದ್ದ ಸಂಪುಟ ವಿಸ್ತರಣೆಯ ಗೊಂದಲಕ್ಕೆ ತೆರೆ ಎಳೆಯಲು ನಿರ್ಧರಿಸಿರುವ ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದೆ.

ಇಬ್ಬರು ಸಚಿವರನ್ನು ಕೈಬಿಡುವ ತೀರ್ಮಾನಕ್ಕೆ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಮ್ಮತಿ ನೀಡಿದ್ದಾರೆ. ಒಟ್ಟು ಎಂಟು ಜನ ಕಾಂಗ್ರೆಸ್‌ ಶಾಸಕರು ಶನಿವಾರ ಸಂಜೆ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬೆಳಗಾವಿಯ ಜಾರಕಿಹೊಳಿ ಸೋದರರ ಪೈಕಿ ರಮೇಶ ಅವರನ್ನು ಸಂಪುಟದಿಂದ ಕೈಬಿಟ್ಟು, ಸತೀಶ ಅವರ ಸೇರ್ಪಡೆಗೆ ಪಕ್ಷದ ರಾಜ್ಯ ಮುಖಂಡರು ಒಲವು ತೋರಿದ್ದಾರೆ. ಅದಕ್ಕೆ ವರಿಷ್ಠರೂ ಒಪ್ಪಿಗೆ ನೀಡಿದ್ದಾರೆ.

ADVERTISEMENT

ಸಂಭವನೀಯ ಬಂಡಾಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ 20 ಜನ ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಇನ್ನೂ ಏಳು ಜನ ಶಾಸಕರಿಗೆ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗುತ್ತಿದೆ.

ಬಂಡಾಯದ ಕಹಳೆ ಊದಿದ್ದ ಸಚಿವ ರಮೇಶ ಜಾರಕಿಹೊಳಿ ಬಣದಲ್ಲಿರುವ ಬಹುತೇಕರಿಗೆ ಮಣೆ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಎನ್‌.ಧರ್ಮಸಿಂಗ್‌ ಅವರ ಪುತ್ರ, ಜೇವರ್ಗಿ ಶಾಸಕ ಅಜಯ್‌ ಸಿಂಗ್‌ ಅವರನ್ನು ದೆಹಲಿ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ.

ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ, ಬಿ.ಸಿ. ಪಾಟೀಲ ಹಾಗೂ ಸಂಗಮೇಶ್ವರ ಅವರಲ್ಲಿ ಒಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಕುರಿತು ತೀವ್ರ ಚರ್ಚೆ ನಡೆಸಲಾಗಿದೆ. ಇವರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.

ಬೆಳಿಗ್ಗೆಯಿಂದಲೇ ಸಭೆ: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌,ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಂಸದಮಲ್ಲಿಕಾರ್ಜುನ ಖರ್ಗೆ, ಸಚಿವ ಡಿ.ಕೆ. ಶಿವಕುಮಾರ್‌ ಅವರು ರಾಜ್ಯಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ಇಲ್ಲಿನ ಜಿ.ಆರ್‌.ಜಿ ರಸ್ತೆಯಲ್ಲಿರುವ ಪಕ್ಷದ ‘ವಾರ್‌ ರೂಂ’ನಲ್ಲಿ ಸಂಜೆ 5ರವರಗೆ ಸುದೀರ್ಘ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಿದರು.

ಸಂಪುಟದಿಂದ ಹೊರಕ್ಕೆ

-ರಮೇಶ ಜಾರಕಿಹೊಳಿ

-ಆರ್‌.ಶಂಕರ್‌

ಸಂಪುಟಕ್ಕೆ

-ಸತೀಶ ಜಾರಕಿಹೊಳಿ
- ಪಿ.ಟಿ. ಪರಮೇಶ್ವರ ನಾಯ್ಕ
- ಆರ್‌.ಬಿ. ತಿಮ್ಮಾಪುರ
- ಎಂ.ಟಿ.ಬಿ. ನಾಗರಾಜ್‌
- ಈ.ತುಕಾರಾಂ
- ರಹೀಂ ಖಾನ್‌
- ಸಿ.ಎಸ್‌. ಶಿವಳ್ಳಿ

ಸಂಸದೀಯ ಕಾರ್ಯದರ್ಶಿಗಳು

- ಅಂಜಲಿ ನಿಂಬಾಳ್ಕರ್‌
- ರೂಪಾ ಶಶಿಧರ
- ವಿ.ಮುನಿಯಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.