ADVERTISEMENT

ಸಂಪುಟ ವಿಸ್ತರಣೆ: ಇಂದು ಶಾ– ಬಿಎಸ್‌ವೈ ಚರ್ಚೆ?

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 20:15 IST
Last Updated 17 ಜನವರಿ 2020, 20:15 IST
ಅಮಿತ್ ಶಾ- ಯಡಿಯೂರಪ್ಪ  -ಸಂಗ್ರಹ ಚಿತ್ರ  (ಎಎನ್‌ಐ)
ಅಮಿತ್ ಶಾ- ಯಡಿಯೂರಪ್ಪ -ಸಂಗ್ರಹ ಚಿತ್ರ (ಎಎನ್‌ಐ)   

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶನಿವಾರ ರಾಜ್ಯಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದ್ದು, ಸಚಿವಾಕಾಂಕ್ಷಿಗಳ ನಿರೀಕ್ಷೆ ಹೆಚ್ಚಿಸಿದೆ.

ಉಪಚುನಾವಣೆ ಮುಗಿದ ಕೂಡಲೇ ‘ಅರ್ಹ’ಗೊಂಡ 11 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದರು. ಆದರೆ, ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪಿಗೆ ನೀಡಿರಲಿಲ್ಲ. ಈ ಬಗ್ಗೆ ಚರ್ಚಿಸಲು ಎರಡು ಬಾರಿ ದೆಹಲಿ ಪ್ರವಾಸ ನಿಗದಿ ಮಾಡಿದ್ದ ಮುಖ್ಯಮಂತ್ರಿ, ಅಮಿತ್ ಶಾ ಸಮಯ ಕೊಡದೇ ಇದ್ದುದರಿಂದ ಪ್ರವಾಸವನ್ನು ರದ್ದುಗೊಳಿಸಿದ್ದರು. ಇದರಿಂದಾಗಿ ಸಚಿವರಾಗಲು ತುದಿ
ಗಾಲಲ್ಲಿ ನಿಂತಿದ್ದವರು ನಿರಾಶೆಗೊಂಡಿದ್ದರು.

‘ಅಮಿತ್ ಶಾ ಸಮಯ ಕೊಟ್ಟಿಲ್ಲ. ಇದೇ 18ರಂದು ರಾಜ್ಯಕ್ಕೆ ಬರಲಿರುವ ಅವರ ಜತೆ ಚರ್ಚೆ ನಡೆಸುವೆ. ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನದಲ್ಲಿ ಪಾಲ್ಗೊಂಡು ವಾಪಸ್ ಆದ ಬಳಿಕ ವಿಸ್ತರಣೆ ಮಾಡುವೆ’ ಎಂದು ಯಡಿಯೂರಪ್ಪ ಹೇಳಿದ್ದರು.

ADVERTISEMENT

ಅಮಿತ್ ಶಾ ಅವರು ಬೆಂಗಳೂರು–ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸಂಪುಟ ವಿಸ್ತರಣೆ ಕುರಿತು ಆ ವೇಳೆ ಚರ್ಚೆಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನವೂ ಪಕ್ಷದಲ್ಲಿ ಶುರುವಾಗಿದೆ. ಒಂದು ವೇಳೆ, ಶಾ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ವಿಮಾನದಲ್ಲಿ ಯಡಿಯೂರಪ್ಪ ಸಹ ಪ್ರಯಾಣ ಮಾಡಿದರೆ ಆಗಷ್ಟೇ ಅವಕಾಶ ಸಿಗಬಹುದು. ಹುಬ್ಬಳ್ಳಿ ಕಾರ್ಯಕ್ರಮ ಮುಗಿಸಲಿರುವ ಶಾ, ಅಲ್ಲಿಂದಲೇ ದೆಹಲಿಗೆ ವಾಪಸ್ ಹೋಗುವುದರಿಂದ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಲು ಸಮಯ ಸಿಗಲಾರದು. ಒಪ್ಪಿಗೆ ಸಿಕ್ಕಿದರಷ್ಟೇ ಸಂಪುಟ ವಿಸ್ತರಣೆ ತಿಂಗಳಾಂತ್ಯದಲ್ಲಿ ನಡೆಯಬಹುದು ಎಂದು ಬಿಜೆಪಿ ಮೂಲಗಳು ಹೇಳಿವೆ.

ಸಚಿವ ಸ್ಥಾನಾಕಾಂಕ್ಷಿಗಳು ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.ಶುಕ್ರವಾರ ಬೆಳಿಗ್ಗೆಯೇ ಯಡಿಯೂರಪ್ಪ ಅವರನ್ನು ಭೇಟಿಯಾದಶಾಸಕರಾದ ಉಮೇಶ ಕತ್ತಿ, ಹೊಳಲ್ಕೆರೆ ಚಂದ್ರಪ್ಪ, ಎಂ.ಪಿ.ರೇಣುಕಾಚಾರ್ಯ, ಕೆ. ಗೋಪಾಲಯ್ಯ,ಅರವಿಂದ ಲಿಂಬಾವಳಿ ಮತ್ತು ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‌ ತಮ್ಮನ್ನು ಸಂ‍‍‍‍ಪುಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.