ADVERTISEMENT

2,430 ಬ್ಯಾಕ್‌ಲಾಗ್‌ ಹುದ್ದೆ: 3 ತಿಂಗಳಲ್ಲಿ ಭರ್ತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 15:58 IST
Last Updated 29 ಜನವರಿ 2022, 15:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ 2,430 ಬ್ಯಾಕ್‌ಲಾಗ್‌ ಹುದ್ದೆಗಳನ್ನು ಮೂರು ತಿಂಗಳೊಳಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಪ್ರಕ್ರಿಯೆಯ ಉಸ್ತುವಾರಿಗಾಗಿ ನೇಮಿಸಿರುವ ಸಚಿವ ಗೋವಿಂದ ಕಾರಜೋಳ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ನಿರ್ದೇಶನ ನೀಡಿದೆ.

ಶನಿವಾರ ಸಭೆ ನಡೆಸಿದ ಸಂಪುಟ ಉಪ ಸಮಿತಿ, ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಿತು. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳು, ಅನುದಾನಿತ ತಾಂತ್ರಿಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 446 ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ 436 ಹುದ್ದೆಗಳು ಖಾಲಿ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಹುದ್ದೆಗಳ ಭರ್ತಿಗೆ ವಾರದೊಳಗೆ ಅಧಿಸೂಚನೆ ಹೊರಡಿಸುವಂತೆ ಸಮಿತಿ ಸೂಚಿಸಿತು.

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನಡೆಯಬೇಕಿರುವ ನೇಮಕಾತಿ ಪ್ರಕ್ರಿಯೆಗಳಿಗೂ ವಾರದೊಳಗೆ ಅಧಿಸೂಚನೆ ಹೊರಡಿಸಬೇಕು. ಆರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಆಯ್ಕೆಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಅದಕ್ಕೆ ಪೂರಕವಾಗಿ ಕೆಪಿಎಸ್‌ಸಿಗೆ ಆಯಾ ಇಲಾಖೆಗಳು ಕೋರಿಕೆ ಸಲ್ಲಿಸಬೇಕು ಎಂದು ಸಮಿತಿ ನಿರ್ದೇಶನ ನೀಡಿತು.

ADVERTISEMENT

ಸಚಿವರಾದ ಕೋಟ ಶ್ರೀನಿವಾಸ ‍ಪೂಜಾರಿ, ಎಸ್‌. ಅಂಗಾರ ಮತ್ತು ಪ್ರಭು ಚವ್ಹಾಣ ಸಭೆಯಲ್ಲಿದ್ದರು. ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಇಲಾಖಾ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.