ವಿಧಾನಸೌಧ
ಬೆಂಗಳೂರು: ಅಧಿಕಾರಿಗಳು (ಸಿ ಮತ್ತು ಡಿ ಶ್ರೇಣಿಗೆ ಮೇಲ್ಪಟ್ಟವರು) ಮುಂಬಡ್ತಿ ಪಡೆಯಬೇಕಾದರೆ ಇನ್ನು ಮುಂದೆ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಈ ವಿವರ ನೀಡಿದರು.
ಕರ್ನಾಟಕ ರಾಜ್ಯ ನಾಗರಿಕ ಸೇವಾ (ಮುಂಬಡ್ತಿ ತರಬೇತಿ ಕಡ್ಡಾಯ) ನಿಯಮಗಳು, 2025ರ ಕರಡು ನಿಯಮ ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ಒಂದು ವೇಳೆ ಕರಡು ನಿಯಮಗಳಿಗೆ ಯಾವುದೇ ಆಕ್ಷೇಪಣೆ, ಸಲಹೆಗಳು ಬಾರದಿದ್ದರೆ ನಿಯಮದ ಜಾರಿಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು.
ಕರಡು ಹೇಳುವುದೇನು?
ಸರ್ಕಾರದಲ್ಲಿ ಸಚಿವಾಲಯ ಸೇರಿ 100ಕ್ಕೂ ಹೆಚ್ಚು ಇಲಾಖೆ, ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳು ತಾವು ಕಾರ್ಯ ನಿರ್ವಹಿಸುತ್ತಿರುವ ಹುದ್ದೆಯಿಂದ ನಂತರದ ಹುದ್ದೆಗೆ ಮುಂಬಡ್ತಿ ಪಡೆಯಲು ಆಯಾ ಇಲಾಖೆಗಳು ನಿಗದಿಪಡಿಸಿರುವ ತರಬೇತಿ ಮಾಡ್ಯೂಲ್‌ಗಳಲ್ಲಿ ಕನಿಷ್ಠ 15 ದಿನಗಳ ತರಬೇತಿ ಪಡೆಯಬೇಕು. ಅಲ್ಲದೇ, ಪ್ರತಿ ಉದ್ಯೋಗಿಯು ಇಲಾಖಾ ಮುಖ್ಯಸ್ಥರು ನಿರ್ದೇಶಿಸಿದ ಕೋರ್ಸ್‌ಗಳಲ್ಲಿ ಪ್ರತಿ ವರ್ಷ ನಿಗದಿಪಡಿಸಿದ ಕನಿಷ್ಠ ಆನ್‌ಲೈನ್ ತರಬೇತಿ ಪಡೆಯಬೇಕು ಎಂದು ಪಾಟೀಲ ತಿಳಿಸಿದರು.
ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ‘ಮಿಡ್ ಟರ್ಮ್ ಕರಿಯರ್ ಟ್ರೈನಿಂಗ್’ ವ್ಯವಸ್ಥೆ ಇದೆ. ರಾಜ್ಯದಲ್ಲೂ ಸರ್ಕಾರಿ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ನಿರಂತರವಾಗಿ ಹೆಚ್ಚಿಸಲು ಅದೇ ರೀತಿಯಲ್ಲಿ ತರಬೇತಿ ಕಡ್ಡಾಯ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ–2 ತನ್ನ 7ನೇ ವರದಿಯಲ್ಲೂ ಪದೋನ್ನತಿಗೆ ಕಡ್ಡಾಯವಾಗಿ ತರಬೇತಿ ನೀಡಬೇಕು ಎಂದು ಶಿಫಾರಸು ಮಾಡಿದೆ. ತರಬೇತಿಯು ಸಿಬ್ಬಂದಿ ಸಾಮರ್ಥ್ಯ ವರ್ಧನೆಯ ಪ್ರಮುಖ ಭಾಗವಾಗಿದೆ. ಇದರಿಂದ ಅಧಿಕಾರಿ– ಸಿಬ್ಬಂದಿ ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತಿ ವರ್ಷ ಹೊಸ ಕಾನೂನುಗಳು, ನಿಯಮಗಳು, ಯೋಜನೆಗಳು, ಕಾರ್ಯಕ್ರಮಗಳು, ಮಾಹಿತಿ ತಂತ್ರಜ್ಞಾನ ಇತ್ಯಾದಿಗಳನ್ನು ಪರಿಚಯಿಸಲಾಗುತ್ತಿದೆ. ಇದನ್ನು ತಿಳಿದುಕೊಂಡು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಮತ್ತು ನಾಗರಿಕರಿಗೆ ಸೇವೆಗಳನ್ನು ಸುಲಭವಾಗಿ ತಲುಪಿಸಲು ನಾಗರಿಕ ಸೇವಾ ಸಿಬ್ಬಂದಿ ಹೊಸ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ತರಬೇತಿ ಪಡೆಯುವುದು ಅವಶ್ಯ ಎಂದರು.
ಲೋಕಸೇವಾ ಆಯೋಗದ ವರದಿ ಮಂಡನೆ
ಕರ್ನಾಟಕ ಲೋಕಸೇವಾ ಆಯೋಗ ತನ್ನ 2024–25 ನೇ ಸಾಲಿನ ವಾರ್ಷಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅದನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.