ADVERTISEMENT

ಹೀಗಿದೆ ನೋಡಿ ಚಾನೆಲ್ ಆಯ್ಕೆ: ಗ್ರಾಹಕರಿಗೆ ಮಾರ್ಗಸೂಚಿ

ಕೇಬಲ್‌, ಡಿಟಿಎಚ್‌ ಹೊಸ ನಿಯಮ ಇಂದಿನಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 1:46 IST
Last Updated 2 ಫೆಬ್ರುವರಿ 2019, 1:46 IST
   

ಬೆಂಗಳೂರು: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ಡಿಟಿಎಚ್‌ ಮತ್ತು ಕೇಬಲ್‌ಗಳಿಗೆ ಸಂಬಂಧಿಸಿದಂತೆ ರೂಪಿಸಿರುವ ಹೊಸ ದರಪಟ್ಟಿ ನಿಯಮಾ ವಳಿ ಶುಕ್ರವಾರದಿಂದಲೇ (ಫೆ.1) ಜಾರಿಗೆ ಬರಲಿದೆ.

ಇದರಿಂದ ಗ್ರಾಹಕರು ಟಿ.ವಿ ಚಾನೆಲ್‌ಗಳು ಸ್ಥಗಿತಗೊಳ್ಳುತ್ತವೆ ಎಂಬ ಗಾಬರಿಗೆ ಒಳಗಾಗಬೇಕಿಲ್ಲ. ಏಕೆಂದರೆ ₹ 154 ಕ್ಕೆ ದೂರದರ್ಶನದ 26 ಮತ್ತು ಫ್ರೀಟು ಏರ್‌(ಉಚಿತ) 74 ಚಾನೆಲ್‌ಗಳು ಪ್ರಸಾರಗೊಳ್ಳುತ್ತವೆ. ಈ ರೀತಿ ಒಟ್ಟು 100 ಚಾನೆಲ್‌ಗಳು ಶುಕ್ರವಾರದಿಂದಲೇ ಟಿ.ವಿಗಳಲ್ಲಿ ಪ್ರಸಾರ ಆಗುತ್ತವೆ. ಇದರ ಜೊತೆಗೆ ಕೆಲವು ಉಚಿತ ಚಾನೆಲ್‌ಗಳೂ ಪ್ರಸಾರ ಆಗುತ್ತವೆ.

ಹೊಸ ನಿಯಮ ಕೇಬಲ್‌ ನೆಟ್‌ವರ್ಕ್‌ ಮತ್ತು ಡಿಟಿಎಚ್‌ ಎರಡಕ್ಕೂ ಅನ್ವಯವಾಗುತ್ತದೆ.ಪರಿಷ್ಕೃತ ದರ ಪಟ್ಟಿ ಭಾರತದ ಎಲ್ಲ ಪ್ರದೇಶಗಳಿಗೂ ಅನ್ವಯವಾಗುತ್ತದೆ. ಇದರಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶವೆಂಬ ಪ್ರತ್ಯೇಕತೆ ಇಲ್ಲ.

ADVERTISEMENT

ತಿಂಗಳುಗಟ್ಟಲೆ ಮನೆ ಬಿಟ್ಟು ಹೋಗುವಾಗ ಏನು ಮಾಡಬೇಕು?

ಯಾವುದೇ ಗ್ರಾಹಕ ತಿಂಗಳುಗಟ್ಟಲೆ ಮನೆ ಬಿಟ್ಟು ಹೋಗುವ ಸಂದರ್ಭ ಬಂದರೆ, ಕೇಬಲ್ ಆಪರೇಟರ್‌ಗಳಿಗೆ ಮೊದಲೇ ತಿಳಿಸಬೇಕು ಒಂದು ವೇಳೆ ನೀವುಮೂರು ತಿಂಗಳವರೆಗೆ ಟಿ.ವಿ ನೋಡದೇ ಇದ್ದರೆ, ನಿರ್ವಹಣಾ ಶುಲ್ಕವೆಂದು ಕೇವಲ ₹25 ಪಾವತಿಸಬೇಕು. ಮೂರು ತಿಂಗಳಿಗಿಂತ ಹೆಚ್ಚು ಅಂದರೆ 9 ತಿಂಗಳವರೆಗೆ ಬಳಸದೇ ಇದ್ದರೆ ಕೇವಲ ₹ 100 ಶುಲ್ಕ ಪಾವತಿಸಬೇಕು. ಆದರೆ ಯಾವುದೇ ಕೇಬಲ್ ನೆಟ್‌ವರ್ಕ್‌ ಸಂಸ್ಥೆ ಅಥವಾ ಡಿಟಿಎಚ್‌ ಆಪರೇಟರ್ ಸಂಸ್ಥೆಯಾಗಲಿ 9 ತಿಂಗಳ ನಂತರ ಪುನಃ ಸಂಪರ್ಕ ಶುಲ್ಕವೆಂದು ಹೆಚ್ಚಿನ ಮೊತ್ತ ಕೇಳುವಂತಿಲ್ಲ.

ಹಣ ಯಾವಾಗ ಪಾವತಿ ಮಾಡಬೇಕು?

ಟ್ರಾಯ್‌ನಹೊಸ ನಿಯಮಗಳ ಅನುಸಾರ ಗ್ರಾಹಕರಿಂದ ಮುಂಚಿತವಾಗಿ ಹಣಪಡೆಯಬೇಕೆ ಅಥವಾ ನಂತರ ಪಡೆಯಬೇಕೆ ಎಂಬುದನ್ನು ಆಯಾ ಎಂಎಸ್‌ಒಗಳೇ ನಿರ್ಧರಿಸಬಹುದು. ಬಹುತೇಕ ಕೇಬಲ್ ಆಪರೇಟರ್‌ಗಳು ತಿಂಗಳ ಕೊನೆಯಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸುತ್ತಾರೆ. ಇದೇ ವ್ಯವಸ್ಥೆ ಮುಂದುವರಿಸಲು ಅವಕಾಶವಿದೆ.

ಚಾನೆಲ್‌ಗಳ ಗುಚ್ಛ ಖರೀದಿ ಹೇಗೆ?

ಟ್ರಾಯ್‌ನ ಹೊಸ ನಿಯಮಗಳ ಪ್ರಕಾರ ಯಾವುದೇ ಬ್ರಾಡ್‌ಕಾಸ್ಟ್‌ ಸಂಸ್ಥೆ, ತನ್ನ ಯಾವುದೇ ಚಾನೆಲ್‌ಗೆ ₹19ಕ್ಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ. ತಮ್ಮನ್ನು ಚಾನೆಲ್‌ನ ವೀಕ್ಷಕರನ್ನು ಕಳೆದುಕೊಳ್ಳಲು ಇಷ್ಟಪಡದ ಹಲವು ಬ್ರಾಡ್‌ಕಾಸ್ಟ್‌ ಸಂಸ್ಥೆಗಳು, ಈಗಾಗಲೇ ಚಾನೆಲ್‌ಗಳ ಗುಚ್ಛವನ್ನು ರೂಪಿಸಿವೆ. ಉದಾಹರಣೆಗೆ ಕಲರ್ಸ್‌ ಸಮೂಹದ ಎಂಟು ಅಥವಾ ಒಂಬತ್ತು ಚಾನೆಲ್‌ಗಳ ಗುಚ್ಛಕ್ಕೆ ₹ 30 ದರ ನಿಗದಿಪಡಿಸಿದೆ. ಜತೆಗೆ ಶೇ 18ರಷ್ಟು ಜಿಎಸ್‌ಟಿ ಪಾವತಿಸಬೇಕು.

ಚಾನೆಲ್‌ಗಳು ಸ್ಥಗಿತಗೊಳ್ಳುತ್ತವೆಯೇ?

ಟೆಲಿವಿಷನ್‌ನಲ್ಲಿ ಎಲ್ಲ ಚಾನೆಲ್‌ಗಳು ಸ್ಥಗಿತಗೊಳ್ಳುವುದಿಲ್ಲ.ದೂರದರ್ಶನದ 26 ಮತ್ತು ಫ್ರೀಟು ಏರ್‌ 74 ಚಾನೆಲ್‌ಗಳು ಪ್ರಸಾರಗೊಳ್ಳುತ್ತವೆ.

ನೆಚ್ಚಿನ ಚಾನೆಲ್‌ ಪಡೆಯಲು ಏನು ಮಾಡಬೇಕು?

* ನೆಚ್ಚಿನ ಚಾನೆಲ್‌ಗಳ ಪ್ರಸಾರ ಆಗುತ್ತಿದೆಯೆ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ

* ನೆಚ್ಚಿನ ಚಾನೆಲ್‌ ಪ್ರಸಾರ ಆಗದಿದ್ದರೆ ಕೇಬಲ್‌ ಆಪರೇಟರ್‌ ಅಥವಾ ಡಿಟಿಎಚ್‌ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ

* ನಿರ್ದಿಷ್ಟ ಚಾನೆಲ್‌ಗೆ ಬೇಡಿಕೆ ಸಲ್ಲಿಸಿ

* ಉದಾಹರಣೆಗೆ ಸ್ಟಾರ್‌ ಮೂವಿಸ್‌ಗೆ ₹18 ದರ ಇರುತ್ತದೆ. ಅದಕ್ಕೆ ಒಪ್ಪಿಗೆ ಸೂಚಿಸಿದರೆ, ಕೇಬಲ್‌ ಆಪರೇಟರ್‌ ಅಂತಹ ಚಾನೆಲ್‌ ಆ್ಯಕ್ಟಿವೇಟ್‌ ಮಾಡುತ್ತಾರೆ.

***

ತಿಂಗಳ ಬಿಲ್‌ ದುಬಾರಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಗ್ರಾಹಕರದು. ಅಗತ್ಯವಿರುವ ಚಾನೆಲ್‌ಗಳನ್ನು ಇತಿಮಿತಿಯಲ್ಲಿ ಆಯ್ಕೆ ಮಾಡಿಕೊಂಡರೆ ದುಬಾರಿ ಆಗುವುದಿಲ್ಲ

– ಮಲ್ಲರಾಜೇ ಅರಸ್‌, ಕೇಬಲ್‌, ಡಿಜಿಟಲ್‌ ಆಪರೇಟರ್‌ಗಳ ಕ್ಷೇಮಾಭಿವೃದ್ಧಿ ಸಂಘ

ಕನ್ನಡ ಚಾನೆಲ್‌ಗಳ ದರ ಪಟ್ಟಿ (ತಿಂಗಳಿಗೆ ₹ಗಳಲ್ಲಿ)
ಜೀ ಕನ್ನಡ 19
ಕಲರ್ಸ್‌ 19
ಕಲರ್ಸ್‌ ಸೂಪರ್‌ 3
ಉದಯ 17
ಸ್ಟಾರ್ ಸುವರ್ಣ 19
ಚಿಂಟು ಟಿವಿ 6
ಕಲರ್ಸ್‌ ಕನ್ನಡ ಸಿನಿಮಾ 2
ಉದಯ ಮೂವೀಸ್‌ 16
ಉದಯ ಕಾಮಿಡಿ 6
ಸುವರ್ಣ ಪ್ಲಸ್‌ 5
ಉದಯ ಮ್ಯೂಸಿಕ್‌ 6
ರಾಜ್‌ ಮ್ಯೂಸಿಕ್‌ 25 ಪೈಸೆ
ನ್ಯೂಸ್ 18 25 ಪೈಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.