ADVERTISEMENT

ಕಳಪೆ ಆರೈಕೆಯಿಂದಲೇ ಬಾಣಂತಿಯರ ಸಾವು

2016–2022ರ ಅವಧಿ * ರಾಜ್ಯ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳೇ ಇಲ್ಲ: ಸಿಎಜಿ ವರದಿ

ಜಯಸಿಂಹ ಆರ್.
Published 20 ಜನವರಿ 2025, 0:45 IST
Last Updated 20 ಜನವರಿ 2025, 0:45 IST
<div class="paragraphs"><p>ಬಾಣಂತಿಯರ ಸಾವು</p></div>

ಬಾಣಂತಿಯರ ಸಾವು

   

ಬೆಂಗಳೂರು: ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪೂರ್ವ, ಹೆರಿಗೆ ಮತ್ತು ಹೆರಿಗೆ ನಂತರದ ಆರೈಕೆ ಸೇವೆಗಳು ಸರಿಯಾಗಿ ಆಗುತ್ತಿಲ್ಲ. ಈ ಕಾರಣದಿಂದಲೇ ಬಾಣಂತಿಯರ ಸಾವು, ಶಿಶು ಮರಣ ಮತ್ತು ನಿರ್ಜೀವ ಹೆರಿಗೆಗಳು ಮರುಕಳಿಸುತ್ತಿವೆ. ಈ ಸೇವೆಗಳು ಕಳಪೆಯಾಗಿರುವುದನ್ನು ಇದು ತೋರಿಸುತ್ತದೆ’ ಎಂದು ಮಹಾಲೇಖಪಾಲ (ಸಿಎಜಿ) ವರದಿ ಹೇಳಿದೆ.

‘ಬಾಣಂತಿ ಮತ್ತು ಶಿಶು ಆರೈಕೆಗೆ ಅಗತ್ಯವಿರುವ ಉಪಕರಣಗಳು, ತಜ್ಞ ಸಿಬ್ಬಂದಿ ಮತ್ತು ಔಷಧಗಳು ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ’ ಎಂಬ ಮಾಹಿತಿಯು ಮಹಾಲೇಖಪಾಲರು ಈಚೆಗೆ ಸಲ್ಲಿಸಿರುವ, ‘ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಗಳ ನಿರ್ವಹಣೆ ವರದಿ’ಯಲ್ಲಿ ಇದೆ. 2016 ರಿಂದ 2022ರ ನಡುವಣ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಪರಿಶೋಧನೆ ನಡೆಸಿ ಈ ವರದಿ ಸಿದ್ದಪಡಿಸಲಾಗಿದೆ.

ADVERTISEMENT

ಬಳ್ಳಾರಿ ಜಿಲ್ಲಾ ಆಸ್ಪತ್ರೆ ಮತ್ತು ಇತರ ಆಸ್ಪತ್ರೆಗಳಲ್ಲೂ ಇದೇ ಸ್ಥಿತಿ ಇದೆ ಎಂಬುದನ್ನು ಸಿಎಜಿ 2022ರಲ್ಲಿ ಅಂದಿನ ರಾಜ್ಯ ಸರ್ಕಾರದ ಗಮನಕ್ಕೆ ತಂದಿತ್ತು. ಸೌಲಭ್ಯಗಳನ್ನು ಹಚ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ರಾಜ್ಯ ಸರ್ಕಾರವು ಪರಿಶೋಧಕರಿಗೆ ತಿಳಿಸಿತ್ತು. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಈಚೆಗೆ ನಡೆದ ಸಾಲು– ಸಾಲು ಬಾಣಂತಿಯರ ಸಾವುಗಳು ಪರಿಸ್ಥಿತಿ ಸುಧಾರಿಸಿಲ್ಲ ಎಂಬುದರತ್ತ ಬೊಟ್ಟು ಮಾಡುತ್ತದೆ.

‘ಈಚಿನ ಐದು ವರ್ಷಗಳಲ್ಲಿ ಸೌಲಭ್ಯಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಉಪಕರಣಗಳು, ಶುದ್ಧೀಕರಣ ವಸ್ತುಗಳ ಕೊರತೆ ಇದ್ದೇ ಇದೆ’ ಎಂದು ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಕಿಮ್ಸ್‌, ವಿಕ್ಟೋರಿಯಾ, ಕೆ.ಸಿ.ಜನರಲ್‌, ಬಳ್ಳಾರಿ, ಕೋಲಾರ ಜಿಲ್ಲಾ ಆಸ್ಪತ್ರೆಗಳು, ಬಂಗಾರಪೇಟೆ, ಕೆ.ಆರ್‌.‍ಪುರ, ಕಲಘಟಗಿ, ನವಲಗುಂದ, ಶ್ರೀನಿವಾಸಪುರ, ಕೂಡ್ಲಿಗಿ, ಪಿರಿಯಾಪಟ್ಟಣ ತಾಲ್ಲೂಕು ಆಸ್ಪತ್ರೆಗಳು ಮತ್ತು ಹಲವು ಸಮುದಾಯ ಆರೋಗ್ಯ ಕೇಂದ್ರಗಳನ್ನು ಪರಿಶೋಧನೆಗೆ ಒಳಪಡಿಸಲಾಗಿತ್ತು. ಹೆರಿಗೆ ಪೂರ್ವ, ಹೆರಿಗೆ ಮತ್ತು ಹೆರಿಗೆ ನಂತರದ ಆರೈಕೆಗೆ ಸಂಬಂಧಿಸಿದಂತೆ ಈ ಎಲ್ಲ ಆಸ್ಪತ್ರೆಗಳಲ್ಲೂ ಹಲವು ಕೊರತೆಗಳು ಕಂಡು ಬಂದವು’ ಎಂದು ವರದಿ ವಿವರಿಸಿದೆ.

ಪ್ರಸವಪೂರ್ವ ಆರೈಕೆ

l ಸ್ತ್ರೀರೋಗ ತಜ್ಞರ ಅನುಪಸ್ಥಿತಿ ಮತ್ತು ಅನಿಯಮಿತ ಲಭ್ಯತೆ ಕಾರಣದಿಂದ ಹೆರಿಗೆಪೂರ್ವ ಆರೈಕೆ ಸೇವೆ ಲಭ್ಯವಿಲ್ಲ

l ಹೆರಿಗೆಪೂರ್ವದಲ್ಲಿ ಆರು ಸ್ವರೂಪದ ಪರೀಕ್ಷೆಗಳನ್ನು ನಡೆಸಬೇಕು. ಉಪಕರಣ, ತಜ್ಞ ಸಿಬ್ಬಂದಿ ಕೊರತೆಯಿಂದ ಎಲ್ಲೆಡೆ ಇದನ್ನು ಪಾಲಿಸುತ್ತಿಲ್ಲ. ಪರಿಣಾಮವಾಗಿ, ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಇದ್ದರೂ ಅದು ಪತ್ತೆಯಾಗುತ್ತಿಲ್ಲ. ಇದರಿಂದ ಹೆರಿಗೆ ಮತ್ತು ನಂತರದಲ್ಲಿ ಜೀವಕ್ಕೆ ಎರವಾಗುವ ಅಪಾಯ

l ಹೆರಿಗೆ ನಂತರ ನಂಜಾಗದಂತೆ ತಡೆಗಟ್ಟಲು ಹೆರಿಗೆಪೂರ್ವದಲ್ಲೇ ನೀಡಬೇಕಾದ ಆರ್‌ಟಿಐ ಮತ್ತು ಎಸ್‌ಟಿಐ ನಿರೋಧಕ ಔಷಧಗಳು ಬಹುತೇಕ ಆಸ್ಪತ್ರೆಗಳಲ್ಲಿ ಇಲ್ಲ

l ವಿಶೇಷ ವೈದ್ಯರ ಕೊರತೆಯ ಕಾರಣದಿಂದ ಎಲ್ಲ ಆಸ್ಪತ್ರೆಗಳಲ್ಲಿ ಸಮಗ್ರ ಗರ್ಭಪಾತ ಆರೈಕೆ ಸೇವೆ ಲಭ್ಯವಿಲ್ಲ

l ಈ ಎಲ್ಲಾ ಕೊರತೆಗಳ ಕಾರಣದಿಂದ ಹೆರಿಗೆಪೂರ್ವದಲ್ಲೇ ಹಲವು ಗರ್ಭಿಣಿಯರಲ್ಲಿ ಹಲವು ಸಮಸ್ಯೆ ಕಾಣಿಸಿಕೊಳ್ಳುತ್ತಿವೆ

ಹೆರಿಗೆ: ಹಲವು ಕೊರತೆ

l ಪರಿಶೋಧನೆಗೆ ಒಳಪಡಿಸಿದ ಬಹುತೇಕ ಆಸ್ಪತ್ರೆಗಳ ಹೆರಿಗೆ ವಾರ್ಡ್‌ಗಳಲ್ಲಿ ಅಗತ್ಯ ಸಿಬ್ಬಂದಿ ಇರಲಿಲ್ಲ. ತಜ್ಞ ವೈದ್ಯರು, ಅರಿವಳಿಕೆ ತಜ್ಞರು, ಅಗತ್ಯ ಸಂಖ್ಯೆಯ ದಾದಿಯರು, ಸ್ವಚ್ಛತಾ ಸಿಬ್ಬಂದಿಯ ಕೊರತೆ ಇತ್ತು

l ಅವಧಿಪೂರ್ವ ಹೆರಿಗೆಗಳಲ್ಲಿ ಸಮಸ್ಯೆಗಳನ್ನು ನಿವಾರಿಸಲು ‘ಕಾರ್ಟಿಕೊಸ್ಟೆರಾಯ್ಡ್‌’ ಚುಚ್ಚುಮದ್ದು ನೀಡಬೇಕು. ಇಂತಹ 5,598 ಪ್ರಕರಣಗಳನ್ನು ಪರಿಶೀಲಿಸಿದಾಗ, 1,221 ಪ್ರಕರಣಗಳಲ್ಲಿ ಚುಚ್ಚುಮದ್ದನ್ನು ನೀಡಿರಲೇ ಇಲ್ಲ

l ಬಿ–ಕಾಂಪ್ಲೆಕ್ಸ್‌, ಹೈಡ್ರಾಲಾಜಿನ್‌, ಲಿಗ್ನೋಕೇನ್‌, ಮೆಥೈಲ್‌ಡೋಪಾ ಮತ್ತು ಆಂಪಿಸಿಲಿನ್‌ನಂತಹ ಅತ್ಯಂತ ಅಗತ್ಯವಾದ ಔಷಧಗಳ ಸಂಗ್ರಹ ಹಲವು ಆಸ್ಪತ್ರೆಗಳಲ್ಲಿ ಇರಲಿಲ್ಲ

l ಹೆರಿಗೆ ಸಂದರ್ಭದ ನೋವಿನ ತೀವ್ರತೆ ಮತ್ತಿತರ ಸಂಕೀರ್ಣತೆಗಳ ನಿಗಾವಹಿಸಲು ಬಳಸುವ ಪಾರ್ಟೋಗ್ರಾಫ್‌ ಸೌಲಭ್ಯವು ಹಲವು ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಇರಲಿಲ್ಲ

ಹೆರಿಗೆ ನಂತರದ 48 ಗಂಟೆಗಳಲ್ಲಿ ಬಾಣಂತಿ ಮತ್ತು ಶಿಶು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗುವುದು ಉತ್ತಮ ಹೆರಿಗೆ ಆರೈಕೆ ಸೇವೆಯ ಲಭ್ಯತೆಯನ್ನು ಸೂಚಿಸುತ್ತದೆ. ಆದರೆ ಲೆಕ್ಕಪರಿಶೋಧನೆಗೆ ಒಳಪಡಿಸಿದ ಆಸ್ಪತ್ರೆಗಳಲ್ಲಿ ಹೀಗೆ 48 ಗಂಟೆಗಳಲ್ಲಿ ಮನೆಗೆ ಹೋದ ಪ್ರಕರಣಗಳ ಪ್ರಮಾಣ (6.3%) ತೀರಾ ಕಳಪೆ ಮಟ್ಟದಲ್ಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.