ADVERTISEMENT

ಚರ್ಚ್‌ನಲ್ಲಿ ಸಿ.ಟಿ ರವಿ ಪರ ಪ್ರಚಾರ:ಟೀಕೆ

ಚುನಾವಣೆ ಸಮಯದಲ್ಲಿ ಚರ್ಚ್‌ ನೆನಪಾಯಿತೇ; ಭೋಜೇಗೌಡ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಮೇ 2023, 20:29 IST
Last Updated 1 ಮೇ 2023, 20:29 IST
ಶಾಸಕ ಸಿ.ಟಿ. ರವಿ
ಶಾಸಕ ಸಿ.ಟಿ. ರವಿ   

ಚಿಕ್ಕಮಗಳೂರು: ‘ಶಾಸಕ ಸಿ.ಟಿ.ರವಿ ಅವರ ಚುನಾವಣಾ ಉಸ್ತುವಾರಿ ಮತ್ತು ಸಂಬಂಧಿಕರಾಗಿರುವ ಸುದರ್ಶನ್‌ ಅವರು ಚರ್ಚ್‌ನಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿ ಮತಯಾಚಿಸಿದ್ದಾರೆ. ಚುನಾವಣೆ ಸಮಯದಲ್ಲಿ ಚರ್ಚ್‌ ನೆನಪಾಯಿತೇ’ ಎಂದು ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಎಲ್‌.ಭೋಜೇಗೌಡ ಪ್ರಶ್ನಿಸಿದರು.

‘ಸುದರ್ಶನ್‌ ಅವರು ಚರ್ಚ್‌ನಲ್ಲಿದ್ದ ವಿಡಿಯೊ ಇದೆ. ಆ ಚರ್ಚ್‌ ಮತಾಂತರ ಮಾಡುವ ಕೇಂದ್ರ ಎಂದು ಸಿ.ಟಿ.ರವಿ ಹಿಂದೊಮ್ಮೆ ಹೇಳಿದ್ದರು. ಚುನಾವಣೆ ಸಮಯದಲ್ಲಿ ನಿಮಗೆ ಚರ್ಚ್‌ ಬೇಕು. ಚುನಾವಣೆ ನಂತರ ಅದನ್ನು ಮತಪರಿವರ್ತನೆ ಕೇಂದ್ರ ಎಂದು ಹೇಳುತ್ತೀರಿ. ನಿಮ್ಮದು ದ್ವಂದ್ವ ನಡೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಹಿಂದುತ್ವದ ಬಗ್ಗೆ ಮಾತನಾಡುತ್ತೀರಿ. ಚುನಾವಣೆ ಸಂದರ್ಭದಲ್ಲಿ ಮದರಸಾಗಳಲ್ಲಿ ಮತಯಾಚನೆ ಮಾಡತ್ತೀರಿ. ನಂತರ, ಅವುಗಳನ್ನು ಭಯೋತ್ಪಾದನೆ ಕೇಂದ್ರಗಳು ಎಂದು ಹೇಳುತ್ತೀರಿ. ಇಂಥ ಮಾತುನಾಡುವುದನ್ನು ಬಿಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿನ ಹೇಳಿಕೆಗೆ (‘ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸಿ’) ಬದ್ಧನಾಗಿದ್ದೇನೆ. ಇದು ಪಕ್ಷದ ಕಾರ್ಯಕರ್ತರ ನಿಲುವು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ನನಗೆ ನೋಟಿಸ್‌ ನೀಡಿದ್ದಾರೆ. ಚುನಾವಣೆ ಬಳಿಕೆ ಉತ್ತರ ನೀಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಅಧಿಕೃತ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ: ’ ‘ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿಎಫ್‌ಐ, ಎಸ್‌ಡಿಪಿಐ, ಸಿಪಿಐ, ಕಾಂಗ್ರೆಸ್‌, ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಚುನಾವಣೆಪೂರ್ವ ಮೈತ್ರಿಯಾಗಿದ್ದರೆ ಅದನ್ನು ಘೋಷಣೆ ಮಾಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದರು.

ತಮ್ಮ ನಿವಾಸದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕ್ಷೇತ್ರಕ್ಕೆ ಸೀಮಿತವಾಗಿ ಹೊಂದಾಣಿಕೆ ಮಾಡಿಕೊಂಡಿದ್ದರೆ ಜೆಡಿಎಸ್‌ ಅಭ್ಯರ್ಥಿ ತಿಮ್ಮಶೆಟ್ಟಿ ಬಲಿ ಕೊಟ್ಟಿದ್ದು ಏಕೆ? ಅಧಿಕೃತ ಹೊಂದಾಣಿಕೆಯೋ?, ರಾಜಕೀಯ ವ್ಯಭಿಚಾರವೋ? ಎಂಬುದನ್ನು ಅವರು (ಎಸ್‌.ಎಲ್‌.ಭೋಜೇಗೌಡ) ಸ್ಪಷ್ಟಪಡಿಸಬೇಕು. ಹಾಲುಮತ ಸಮಾಜದವರು ಇಂಥ ರಾಜಕಾರಣಿಗಳಿಗೆ ಕವಡೆ
ಕಿಮ್ಮತ್ತು ಕೊಡಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯಗೆ ‘ಸಿದ್ರಾಮುಲ್ಲಾ ಖಾನ್‌’, ಎಚ್‌.ಡಿ.ದೇವೇಗೌಡ ಅವರಿಗೆ ‘ಮುಂದಿನ ಜನ್ಮದಲ್ಲಿ ಸಾಬರಾಗಿ ಹುಟ್ಟಿ’ ಎಂದು ಸಿ.ಟಿ.ರವಿ ಹೇಳಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ರವಿಗೆ ಪಾಠ ಕಲಿಸಬೇಕು’ ಎಂದು ಎಸ್‌.ಎಲ್‌.ಭೋಜೇಗೌಡ ಅವರು ಚಿಕ್ಕಗೌಜ ಗ್ರಾಮದಲ್ಲಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಹೇಳಿಕೆ ಕಾರ್ಯಕರ್ತರ ನಿರ್ಧಾರಕ್ಕೆ ಬದ್ಧ: ಭೋಜೇಗೌಡ

ಚಿಕ್ಕಮಗಳೂರು: ‘ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿರುವ ವಿಡಿಯೊದಲ್ಲಿನ ನನ್ನ ಹೇಳಿಕೆಗೆ (‘ಈ ಬಾರಿ ಕಾಂಗ್ರೆಸ್‌ಗೆ ವೋಟು ಹಾಕಿ’) ಈಗಲೂ ಬದ್ಧನಾಗಿದ್ದೇನೆ. ಇದು ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಒಕ್ಕೊರಲ ತೀರ್ಮಾನ’ ಎಂದು ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಎಲ್‌.ಭೋಜೇಗೌಡ ಇಲ್ಲಿ ಸೋಮವಾರ ಹೇಳಿದರು.

‘ಬಿ.ಎಂ. ತಿಮ್ಮಶೆಟ್ಟಿ ಅವರು ಬೇರೆಯವರ ಕುಮ್ಮಕ್ಕಿನಿಂದ ಜೆಡಿಎಸ್‌ ಸೇರಿ ಅಭ್ಯರ್ಥಿಯಾಗಿದ್ದಾರೆ. ಈ ವಿಷಯ ಕ್ಷೇತ್ರದಲ್ಲಿ ಪಂಚರತ್ನ ಕಾರ್ಯಕ್ರಮ ಸಂದರ್ಭದಲ್ಲಿ ಗೊತ್ತಾಯಿತು ತಕ್ಷಣ ಹುಷಾರಾದೆವು. ಹೀಗಾಗಿ ಬೇರೆ ಪಕ್ಷದ ಅಭ್ಯರ್ಥಿ ಬೆಂಬಲಿಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಈ ತೀರ್ಮಾನ ಈ ಕ್ಷೇತ್ರಕ್ಕೆ ಮಾತ್ರ ಅನ್ವಯಿಸುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಹೊಟ್ಟೆಕಿಚ್ಚು ಪಡುತ್ತಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ರವಿ ಅವರಿಗೆ ಮತ ಹಾಕಬೇಡಿ ಎಂದು ಹೇಳಬಾರದೇ? ಸಹಸ್ರಾರು ಕೋಟಿ ಅನುದಾನ ಒದಗಿಸಿ ಕ್ಷೇತ್ರ ಅಭಿವೃದ್ಧಿ ಮಾಡಿದ್ದೇನೆ ಎಂದು ರವಿ ಹೇಳಿದ್ದಾರೆ. ಆದರೆ ಮತಯಾಚನೆಗೆ ಅವರು ಹೊರ ರಾಜ್ಯಗಳಿಂದ ಪಕ್ಷದ ಮುಖಂಡರನ್ನು ಕರೆಸುವುದು ಏಕೆ? ಅಭಿವೃದ್ಧಿಯೇ ಸಾಕಲ್ಲವೇ?’ ಎಂದು ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಮತದಾರರಿಗೆ ಚಿನ್ನದ ನಾಣ್ಯ ಹಂಚಲು ತಯಾರಿ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಅಂಗನಾಡಿ ಕಾರ್ಯಕರ್ತೆಯರ ಮೂಲಕ ಸೀರೆ ಹಂಚಲಾಗುತ್ತಿದೆ ಎಂಬ ದೂರು ಇದೆ. ಮುಸ್ಲಿಮರನ್ನು ಹಜ್‌ ಯಾತ್ರೆಗೆ ಕಳಿಸುವ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಬೇಕು’ ಎಂದರು. ‘ರೊಚ್ಚಿಗೆದ್ದ ಜೆಡಿಎಸ್‌ ಕಾರ್ಯಕರ್ತ ಎಂಬ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡಲಾಗಿದೆ. ಆ ಕಾರ್ಯಕರ್ತನ ಹೆಸರು ಗೊಲ್ಲ ಬೋವಿ. ಆತ ಬಿಜೆಪಿ ಕಾರ್ಯಕರ್ತ ಮತ್ತು ಸಿ.ಟಿ.ರವಿ ಅವರ ಬಲಗೈ ಭಂಟ. ನಾನು ಮತ್ತು ಆತ ಫೋನ್‌ನಲ್ಲಿ ಮಾತನಾಡಿದ ಸಂಭಾಷಣೆ ಹರಿಯಬಿಟ್ಟಿದ್ದಾರೆ. ಈ ಕೃತ್ಯದ ಹಿಂದೆ ರವಿ ಕೈವಾಡವಿರಬಹುದು’ ಎಂದು ಗುಮಾನಿ ವ್ಯಕ್ತಪಡಿಸಿದರು. ಮುಖಂಡರಾದ ನಿಸಾರ್ ಅಹಮದ್ ದೇವಿಪ್ರಸಾದ್ ಎ.ಸಿ.ಕುಮಾರಗೌಡ ಗೋಪಿ ದಿನೇಶ್ ಪೂರ್ಣೇಶ್ ಸಿ.ಕೆ.ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.