ADVERTISEMENT

ಜೆಡಿಎಸ್‌ ಪರ ಪ್ರಚಾರ: ಡಿವೈಎಸ್‌ಪಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 16:32 IST
Last Updated 30 ನವೆಂಬರ್ 2021, 16:32 IST
   

ಬೆಂಗಳೂರು: ವಿಧಾನ ಪರಿಷತ್‌ನ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪರ ಲೋಕಾಯುಕ್ತದ ಬಳ್ಳಾರಿ ಡಿವೈಎಸ್‌ಪಿ ಪುರುಷೋತ್ತಮ್‌ ಪ್ರಚಾರ ನಡೆಸುತ್ತಿದ್ದಾರೆ ಎಂದು ಈ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌. ರವಿ, ರಾಜ್ಯದ ಮುಖ್ಯ ಚುನಾವಣಾಧಿಕಾರಿ, ಕ್ಷೇತ್ರ ಚುನಾವಣಾಧಿಕಾರಿ ಮತ್ತು ಲೋಕಾಯುಕ್ತರಿಗೆ ಮಂಗಳವಾರ ದೂರು ನೀಡಿದ್ದಾರೆ.

‘ಪುರುಷೋತ್ತಮ್‌ ರಾಮನಗರದ ನಿವಾಸಿಯಾಗಿದ್ದಾರೆ. ವಿಧಾನ ಪರಿಷತ್‌ ಚುನಾವಣೆ ಘೋಷಣೆಯಾದ ದಿನದಿಂದಲೂ ಜೆಡಿಎಸ್‌ ಅಭ್ಯರ್ಥಿ ಎಚ್‌.ಎಂ. ರಮೇಶ್‌ ಗೌಡ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಖಾಸಗಿ ಮೊಬೈಲ್‌ ಸಂಖ್ಯೆ 9900999688 ಮೂಲಕ ಕರೆಮಾಡಿ, ಮತದಾರರಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಜತೆ ಮಾತನಾಡಿಸಿ ಆಮಿಷ ಒಡ್ಡುತ್ತಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ಲೋಕಾಯುಕ್ತದ ಅಧಿಕಾರಿಯಾಗಿದ್ದರೂ ಪುರುಷೋತ್ತಮ್‌, ಮತದಾರರಿಗೆ ಬೆದರಿಕೆ ಹಾಕುವ, ಹಣದ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಮತದಾರರಿಗೆ ಹಂಚಲು ಇವರಿಗೆ ಹಣ ನೀಡಿದವರು ಯಾರು? ಎಂಬುದರ ಕುರಿತು ತನಿಖೆ ನಡೆಸಬೇಕು. ದಾಳಿಮಾಡಿ ಹಣ ವಶಕ್ಕೆ ಪಡೆಯಬೇಕು. ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡು, ಚುನಾವಣಾ ಅಕ್ರಮಗಳನ್ನು ತಡೆಯಬೇಕು. ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸಬೇಕು’ ಎಂದು ರವಿ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.