ADVERTISEMENT

ಕ್ಯಾನ್ಸರ್‌: ಅಗ್ಗದ ದರದಲ್ಲಿ ಪೆಟ್‌ ಸ್ಕ್ಯಾನ್‌ ಪರೀಕ್ಷೆ- ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 12:16 IST
Last Updated 4 ಫೆಬ್ರುವರಿ 2022, 12:16 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾ
ಮುಖ್ಯಮಂತ್ರಿ ಬಸವರಾಜ ಬೊಮ್ಮಾ   

ಬೆಂಗಳೂರು: ‘ಕ್ಯಾನ್ಸರ್‌ ಪತ್ತೆಗೆ ನೆರವಾಗುವ ‘ಪೆಟ್‌ ಸ್ಕ್ಯಾನ್‌’ ಪರೀಕ್ಷೆಯನ್ನು ಎಲ್ಲರೂ ಅಗ್ಗದ ದರದಲ್ಲಿ ಮಾಡಿಸಿಕೊಳ್ಳಬೇಕು. ಈ ಉದ್ದೇಶದಿಂದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಎರಡು ‘ಪೆಟ್‌ ಸ್ಕ್ಯಾನ್‌’ ಯಂತ್ರ ಒದಗಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.

‘ಖಾಸಗಿ ಆಸ್ಪತ್ರೆಯಲ್ಲಿ ಒಮ್ಮೆ ಪೆಟ್‌ ಸ್ಕ್ಯಾನ್‌ ಮಾಡಿಸಿಕೊಳ್ಳಬೇಕಾದರೆ ಕನಿಷ್ಠ ₹25 ಸಾವಿರ ಶುಲ್ಕ ಪಾವತಿಸಬೇಕು. ಬಡರೋಗಿಗಳು ಇಷ್ಟು ಮೊತ್ತ ಹೊಂದಿಸುವುದು ಕಷ್ಟ. ಇನ್ನು ಮುಂದೆ ಅವರು ₹8 ಸಾವಿರದಿಂದ ₹10 ಸಾವಿರ ಶುಲ್ಕ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಪ್ರಾಥಮಿಕ ಹಂತದಲ್ಲೇ ರೋಗಲಕ್ಷಣ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಕ್ಯಾನ್ಸರ್‌ ಅನ್ನು ಸುಲಭವಾಗಿ ಗುಣ‍ಪಡಿಸಬಹುದು. ಹೀಗಾಗಿ ಯಾರೂ ಎದೆಗುಂದಬಾರದು’ ಎಂದರು.

ADVERTISEMENT

‘ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಾದರಿಯಲ್ಲೇ ಪ್ರಾದೇಶಿಕವಾರು ಕ್ಯಾನ್ಸರ್‌ ಆಸ್ಪತ್ರೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕ್ಯಾನ್ಸರ್‌ ಪೀಡಿತರು ಔಷಧ ವೆಚ್ಚ ಭರಿಸಲು ಪರದಾಡುವ ಪರಿಸ್ಥಿತಿ ಇದೆ. ಅವರಿಗೆ ಕೈಗೆಟಕುವ ದರದಲ್ಲಿ ಔಷಧಗಳು ಸಿಗುವಂತಾಗಬೇಕು. ಇದಕ್ಕಾಗಿ ಸೊಸೈಟಿಯೊಂದನ್ನು ಸ್ಥಾಪಿಸಲು ಚಿಂತಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಔಷಧ ತಯಾರಿಕಾ ಸಂಸ್ಥೆಗಳ ಜೊತೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

‘ಜನೌಷಧಿ ಕೇಂದ್ರಗಳಲ್ಲಿ ಕ್ಯಾನ್ಸರ್‌ ಔಷಧಗಳು ಕಡಿಮೆ ದರದಲ್ಲಿ ಸಿಗುವಂತಾಗಬೇಕು. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕು ಮಟ್ಟದಿಂದಲೇ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮೂಲಕ ಆರೋಗ್ಯ ಕರ್ನಾಟಕ ನಿರ್ಮಿಸುವುದಕ್ಕೆ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

ಸ್ತನ ಕ್ಯಾನ್ಸರ್‌ ಕುರಿತು ಜಾಗೃತಿ ಅಭಿಯಾನ

‘ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್‌ ಕುರಿತು ವರ್ಷವಿಡೀ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ತಾಲ್ಲೂಕು ಮಟ್ಟದಿಂದಲೇ ಅಭಿಯಾನ ಆರಂಭಿಸಿ ಅದನ್ನು ಪರಿಣಾಮಕಾರಿಗೊಳಿಸಬೇಕು. ಸ್ತನ ಕ್ಯಾನ್ಸರ್‌ ನಿವಾರಣೆ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಬೇಕು. ಕ್ಯಾನ್ಸರ್‌ ಚಿಕಿತ್ಸೆಯ ನಂತರವೂ ಆರೋಗ್ಯಕರ ಜೀವನ ನಡೆಸಬಹುದು ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.