ADVERTISEMENT

ಪರೀಕ್ಷೆ ರದ್ದು: ಒಂದು ತೊಟ್ಟು ವಿಷ ಕೊಡಿ– ಆಕ್ರೋಶ

ಪರೀಕ್ಷೆ ರದ್ದು: ನಿರ್ಧಾರ ಮರುಪರಿಶೀಲಿಸುವಂತೆ ಆಯ್ಕೆಯಾದವರ ಆಗ್ರಹ

ಪ್ರಮೋದ
Published 29 ಏಪ್ರಿಲ್ 2022, 18:57 IST
Last Updated 29 ಏಪ್ರಿಲ್ 2022, 18:57 IST
ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಹುಬ್ಬಳ್ಳಿಯಲ್ಲಿ ಶುಕ್ರವಾರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದರು
ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಹುಬ್ಬಳ್ಳಿಯಲ್ಲಿ ಶುಕ್ರವಾರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದರು   

ಹುಬ್ಬಳ್ಳಿ: ‘ಕೆಲವರು ಅಕ್ರಮ ಎಸಗಿದ್ದಾರೆ ಎಂದ ಮಾತ್ರಕ್ಕೆ ಮರುಪರೀಕ್ಷೆ ಮಾಡುವುದಾಗಿ ಘೋಷಿಸಿ ಸರ್ಕಾರ ಅನ್ಯಾಯ ಮಾಡಿದೆ. ಅದರ ಬದಲು ಸರ್ಕಾರವೇ ನಮಗೆ ಒಂದು ತೊಟ್ಟು ವಿಷ ಕೊಟ್ಟುಬಿಡಲಿ...’

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 75ನೇ ರ್‍ಯಾಂಕ್‌ ಪಡೆದಿರುವ ಬೆಳಗಾವಿ ಜಿಲ್ಲೆಯ ಸವದತ್ತಿಯ ಅರುಣ್ ಮೇಟಿ ಅವರ ಆಕ್ರೋಶದ ಮಾತುಗಳು ಇವು.

ನಗರದಲ್ಲಿ ಶುಕ್ರವಾರ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರ ಸಂಖ್ಯೆ ಹೆಚ್ಚಿದೆ. ಇನ್ನೂ ತನಿಖೆ ಪೂರ್ಣಗೊಂ
ಡಿಲ್ಲ, ಆಗಲೇ ಮರುಪರೀಕ್ಷೆ ಎಂದರೆ ಹಗಲಿರುಳು ಕಷ್ಟಪಟ್ಟು ಓದಿ ಪರೀಕ್ಷೆ ಪಾಸಾ
ದವರ ಗತಿ ಏನು’ ಎಂದು ಪ್ರಶ್ನಿಸಿದರು.

ADVERTISEMENT

‘ಒಂದು ಸಲ ಪರೀಕ್ಷೆ ಪಾಸಾಗಲು 3 ವರ್ಷ ಕುಟುಂಬಕ್ಕೂ ಸಮಯ ನೀಡದೆ ಕಷ್ಟಪಟ್ಟು ಓದಿದ್ದೇನೆ. ಸರ್ಕಾರದ ನಿರ್ಧಾರದಿಂದ ಪ್ರಾಮಾಣಿಕರಿಗೆ ಅನ್ಯಾಯವಾಗುತ್ತದೆ.’ ಎಂದರು.

‘ಅಕ್ರಮ ಎಸಗಿದವರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಂಡು ನ್ಯಾಯಕೊಡುತ್ತದೆ ಎಂದು ಬಲವಾಗಿ ನಂಬಿಕೊಂಡಿದ್ದೆ.’ ಎಂದರು.

31ನೇ ರ್‍ಯಾಂಕ್‌ ಪಡೆದ ಬೆಳಗಾವಿ ಜಿಲ್ಲೆಯ ರಾಯಬಾಗದ ವಿದ್ಯಶ್ರೀ ಬಳಿಗಾರ ‘ಮರುಪರೀಕ್ಷೆ ನಿರ್ಧಾರ ಸರಿಯಲ್ಲ. ಲಾಕ್‌ಡೌನ್‌ ಸಮಯದಲ್ಲಿ ಮನೆಬಿಟ್ಟು ಧಾರವಾಡದಲ್ಲಿದ್ದು ಓದಿದ್ದೇನೆ. ಪ್ರಾಮಾಣಿಕವಾಗಿ ಆಯ್ಕೆಯಾದವರಿಗೆ ಸರ್ಕಾರ ನ್ಯಾಯ ಕೊಡಬೇಕು. ಮರು ಪರೀಕ್ಷೆಯೂ ಅಕ್ರಮವಿಲ್ಲದೇ ನಡೆಯುತ್ತದೆ ಎನ್ನುವುದಕ್ಕೆ ಏನು ಗ್ಯಾರಂಟಿ’ ಎಂದು ಪ್ರಶ್ನಿಸಿದರು.

ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ಗದಗ, ಬೆಳಗಾವಿ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಯ 20ಕ್ಕೂ ಹೆಚ್ಚು ಜನ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

‘ಹಣ ಕೊಟ್ಟಿದ್ದರೆ ವಾಪಸ್‌ ಕೊಡಲಿ, ಗ್ಯಾರೇಜ್‌ ಆರಂಭಿಸುತ್ತೇನೆ’

ಹುಬ್ಬಳ್ಳಿ: ‘ತಾಯಿಯ ₹1,500 ಪಿಂಚಣಿ ಹಣದಲ್ಲಿ ಕಷ್ಟಪಟ್ಟು ಓದಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದೇನೆ. ಸರ್ಕಾರ ಮುರುಪರೀಕ್ಷೆ ನಿರ್ಧಾರ ಮಾಡಿ ಬದುಕಿನ ಖುಷಿಯನ್ನೇ ಕೊಂದು ಹಾಕಿತು’ ಎಂದು 94ನೇ ರ್‍ಯಾಂಕ್‌ ಪಡೆದ ಚಿಕ್ಕೋಡಿಯ ಸಂತೋಷ್‌ ಕಾಂಬ್ಳೆ ಸೇನಾಪತಿ ನೋವು ತೋಡಿಕೊಂಡರು.

‘ಹುದ್ದೆಗೆ ಆಯ್ಕೆ ಮಾಡುವಂತೆ ನಾನು ಯಾರಿಗಾದರೂ ಹಣ ಕೊಟ್ಟಿದ್ದರೆ, ವಾಪಸ್‌ ಕೊಡಲಿ; ಅದೇ ಹಣದಿಂದ ಊರಿನಲ್ಲಿ ಗ್ಯಾರೇಜ್‌ ಆರಂಭಿಸುತ್ತೇನೆ. ನಮ್ಮ ಕುಟುಂಬದ ಎಲ್ಲಾ ಆಸ್ತಿ ಮಾರಿದರೂ ₹3 ಲಕ್ಷ ಹಣ ಬರುವುದಿಲ್ಲ’ ಎಂದು ಮೆಕಾನಿಕಲ್‌ ಎಂಜಿನಿಯರ್‌ ಓದಿರುವ ಸಂತೋಷ್‌ ಹೇಳಿದರು.

‘ನಾನೂ ವಿಚಾರಣೆಗೆ ಒಳಗಾಗಿದ್ದೇನೆ. ಸರ್ಕಾರದಿಂದ ನ್ಯಾಯ ಸಿಗುವ ಭರವಸೆಯಿತ್ತು. ಆಯ್ಕೆಯಾದ ಅಭ್ಯರ್ಥಿಗಳ ವಿಚಾರಣೆ ಮಾಡಿ ಈಗ ಮರುಪರೀಕ್ಷೆ ಘೋಷಿಸಿರುವ ಸರ್ಕಾರ ದೊಂಬರಾಟ ಆಡುತ್ತಿದೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.