ADVERTISEMENT

ಹಣ ಅಕ್ರಮ ಸಾಗಣೆ ಆರೋಪ: ಕಾಂಗ್ರೆಸ್‌ ಮುಖಂಡರ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 19:15 IST
Last Updated 9 ಮಾರ್ಚ್ 2019, 19:15 IST
ಭೀಮಣ್ಣ ನಾಯ್ಕ
ಭೀಮಣ್ಣ ನಾಯ್ಕ   

ಕಾರವಾರ/ ಶಿರಸಿ: ಕಳೆದ ವಿಧಾನಸಭಾ ಚುನಾವಣೆ ವೇಳೆ ಅಕ್ರಮವಾಗಿ ಹಣ ಸಾಗಿಸಿದ ಆರೋಪದಲ್ಲಿ, ಜಿಲ್ಲೆಯ ಇಬ್ಬರು ಕಾಂಗ್ರೆಸ್ ಮುಖಂಡರ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ಕಾರವಾರದ ಮಾಜಿ ಶಾಸಕ ಸತೀಶ ಸೈಲ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದರು.

2018ರ ಮೇ 1ರಂದು ನೆಲಮಂಗಲದ ಚೆಕ್‌ಪೋಸ್ಟ್ ಸಮೀಪ ಕಾರೊಂದರಲ್ಲಿ ₹1.22 ಕೋಟಿ ನಗದು ಪತ್ತೆಯಾಗಿತ್ತು. ಈ ಸಂಬಂಧ ಕಾರಿನಲ್ಲಿದ್ದವರನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪ್ರಶ್ನಿಸಿದಾಗ ಭೀಮಣ್ಣ ಮತ್ತು ಸೈಲ್ ಅವರ ಹೆಸರನ್ನು ಹೇಳಿದ್ದರು. ಹಾಗಾಗಿ ಅವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಆದಾಯ ತೆರಿಗೆ ಅಧಿಕಾರಿಗಳು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು.

ADVERTISEMENT

ಅದರಂತೆ, ಭೀಮಣ್ಣ ನಾಯ್ಕ ವಿರುದ್ಧ ಶಿರಸಿ ಉಪ ವಿಭಾಗಾಧಿಕಾರಿ ಈಶ್ವರ ಉಳ್ಳಾಗಡ‌್ಡಿ ಶಿರಸಿಯಲ್ಲಿ ಹಾಗೂ ಸತೀಶ್ ಸೈಲ್ ವಿರುದ್ಧ ಕಾರವಾರ ಉಪ ವಿಭಾಗಾಧಿಕಾರಿ ಅಭಿಜಿನ್, ಅಂಕೋಲಾ‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದೇ ಪ್ರಕರಣದ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಸತೀಶ ಸೈಲ್ ಆಪ್ತ ಮಂಗಲದಾಸ್ ಕಾಮತ್ ಹಾಗೂ ಭೀಮಣ್ಣ ನಾಯ್ಕ ಅವರ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.