ADVERTISEMENT

ತಿಂಗಳಾಂತ್ಯಕ್ಕೆ ಜಾತಿ ಜನಗಣತಿ ವರದಿ ಸಲ್ಲಿಕೆ: ಜಯಪ್ರಕಾಶ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 14:25 IST
Last Updated 24 ಜನವರಿ 2024, 14:25 IST
ಕೆ. ಜಯಪ್ರಕಾಶ ಹೆಗ್ಡೆ
ಕೆ. ಜಯಪ್ರಕಾಶ ಹೆಗ್ಡೆ   

ಬೆಂಗಳೂರು: ‘ಈ ತಿಂಗಳ ಅಂತ್ಯಕ್ಕೆ (ಜ. 31) ನಮ್ಮ ಅವಧಿ ಮುಗಿಯಲಿದೆ. ರಾಜ್ಯದಲ್ಲಿ ನಡೆದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು (ಜಾತಿ ಜನಗಣತಿ) ಅವಧಿ ಮುಗಿಯುವ ಒಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ತಿಳಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ವರದಿಯನ್ನು ಸಲ್ಲಿಸಲು ಮುಖ್ಯಮಂತ್ರಿ ಬಳಿ ಸಮಯ ಕೇಳಿದ್ದೇವೆ. ಅವರು ಈಗ ಬಜೆಟ್ ಸಿದ್ಧತೆಯಲ್ಲಿ ನಿರತರಾಗಿದ್ದಾರೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹೆಗ್ಡೆ, ‘ಈ ವರದಿ ಜಯಪ್ರಕಾಶ್ ಹೆಗ್ಡೆ ಅಥವಾ ಕಾಂತರಾಜ (ಆಯೋಗದ ಹಿಂದಿನ ಅಧ್ಯಕ್ಷ) ವರದಿ ಎಂದೇನೂ ಇಲ್ಲ. ದತ್ತಾಂಶಗಳನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸಬೇಕಿತ್ತು. ಅದಕ್ಕಾಗಿ ಸಮಯಾವಕಾಶ ಪಡೆದಿದ್ದೆವು. ವರದಿ ಸಿದ್ಧಪಡಿಸುವ ಕೆಲಸ ಮುಗಿಯುತ್ತಾ ಬಂದಿದೆ. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ. ಇದು ಆಯೋಗದ ವರದಿ’ ಎಂದರು.

ADVERTISEMENT

‘ವರದಿ ಸಲ್ಲಿಕೆಯಾಗುವ ಮೊದಲೇ ಚರ್ಚೆಗಳು ನಡೆಯುತ್ತಿವೆ. ವರದಿ ಬಹಿರಂಗವಾದ ಬಳಿಕ ಪರ, ವಿರೋಧದ ಚರ್ಚೆ ನಡೆದರೆ ಒಳ್ಳೆಯದು. ವರದಿಯನ್ನು ಸರ್ಕಾರ ಸಚಿವ ಸಂಪುಟ ಸಭೆಯ ಮುಂದೆ ಇಡಲಿದೆ. ವರದಿ ಕೊಡುವುದಷ್ಟೆ ನಮ್ಮ ಕೆಲಸ. ಸಮುದಾಯಗಳ ಬೇಡಿಕೆ ಈಡೇರಿಸುವುದು ಸರ್ಕಾರದ ಕೆಲಸ’ ಎಂದರು. 

‘ನಮ್ಮ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸುವ ಬಗ್ಗೆ ಬಹಿರಂಗವಾಗಿ ಏನೂ ಹೇಳುವುದಿಲ್ಲ. ಅದು ನಮ್ಮ‌ ಮತ್ತು ಸರ್ಕಾರದ ಆಂತರಿಕ ವಿಚಾರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.