ನಾಗಮೋಹನದಾಸ್
ಬೆಂಗಳೂರು: ‘ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ಜಾತಿವಾರು ವರ್ಗೀಕರಣವನ್ನು ಪರಿಷ್ಕರಿಸಿ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದು ಸೂಕ್ತ’ ಎಂದು ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ.
ಆಯೋಗ ಸಲ್ಲಿಸಿರುವ ವರದಿಯ ಕುರಿತು ಚರ್ಚಿಸಲು ಮಂಗಳವಾರ (ಆಗಸ್ಟ್ 19) ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಗೆ ಇಲಾಖೆ ಸಲ್ಲಿಸಿರುವ ‘ರಹಸ್ಯ ಟಿಪ್ಪಣಿ’ಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಟಿಪ್ಪಣಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ವರ್ಗೀಕರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸುವ ಅಗತ್ಯವಿದೆ’ ಎಂದು ಇಲಾಖೆ ತನ್ನ ಟಿಪ್ಪಣಿಯಲ್ಲಿ ಪ್ರತಿಪಾದಿಸಿರುವುದರಿಂದಾಗಿ, ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಳ್ಳಬಹುದಾದ ನಿರ್ಣಯದ ಬಗ್ಗೆ ಎಲ್ಲರ ಚಿತ್ತ ನಿಟ್ಟಿದೆ. ಆಯೋಗ ಈಗಾಗಲೇ ಹಂಚಿಕೆ ಮಾಡಿರುವ ‘ಮೀಸಲು’ ಪ್ರಮಾಣ ಬದಲಾಗುವ ಸಾಧ್ಯತೆಯಿದೆ ಎಂದೂ ಮೂಲಗಳು ಹೇಳಿವೆ.
ಟಿಪ್ಪಣಿಯಲ್ಲಿ ಏನಿದೆ?
2011ರ ಜನಗಣತಿಯಂತೆ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಪರಿಶಿಷ್ಟ ಜಾತಿ ಎಂದು ನಮೂದಿಸಿರುವವರ ಒಟ್ಟು ಜನಸಂಖ್ಯೆ 44.67 ಲಕ್ಷ (ಶೇ 43.63). ಪ್ರಸ್ತುತ ಸಮೀಕ್ಷೆಯಲ್ಲಿ 4,75,954ರಷ್ಟು ಜನರು ಅವರ ಮೂಲ ಜಾತಿಯನ್ನು ತಿಳಿಸಿಲ್ಲ. ಈ ಜನಸಂಖ್ಯೆಯನ್ನು ಪ್ರವರ್ಗ ‘ಇ’ ಎಂದು ವಿಂಗಡಿಸಿ ಶೇಕಡಾ 1 ಮೀಸಲಾತಿಯನ್ನು ಆಯೋಗದ ವರದಿಯಲ್ಲಿ ಹಂಚಿಕೆ ಮಾಡಲು ಶಿಫಾರಸು ಮಾಡಲಾಗಿದೆ. ಮೂಲ ಜಾತಿಯನ್ನು ತಿಳಿಸದೇ ಇರುವ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಗಳನ್ನು ಒಂದು ಗುಂಪಾಗಿ ವಿಂಗಡಿಸಿ ಶೇ 1 ರಷ್ಟು ಮೀಸಲಾತಿ ನೀಡಿದರೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರವೇಶ ಪಡೆಯುವಾಗ ‘ಡುಪ್ಲಿಕೇಟ್’ ಆಗಬಹುದು. ಈ ಜನರು ಇತರ ನಾಲ್ಕು ಗುಂಪುಗಳಲ್ಲಿಯೂ (ಪ್ರವರ್ಗ ಎ, ಬಿ, ಸಿ ಮತ್ತು ಡಿ) ಮೀಸಲಾತಿ ಪಡೆಯುವ ಸಂಭವ ಇರುತ್ತದೆ.
ಆಯೋಗದ ವರದಿಯ ಅನ್ವಯ ಪ್ರವರ್ಗ ‘ಎ’ ಗುಂಪುಗಳಿಗೆ ಶೇ 1ರಷ್ಟು ಮೀಸಲಾತಿ ಹಂಚಿಕೆಯಾಗಿದೆ. ಈ ಶೇ 1ರಷ್ಟು ಮೀಸಲಾತಿಯನ್ನು 100 ರೋಸ್ಟರ್ ಬಿಂದುಗಳಲ್ಲಿ (ನೇಮಕಾತಿ ಮತ್ತು ಬಡ್ತಿ ನೀಡುವ ವೇಳೆ ಮೀಸಲಾತಿ ಬಿಂದುಗಳನ್ನು ಗುರುತಿಸುವ ಪಟ್ಟಿ) ಗುರುತಿಸಿ ಅನುಷ್ಠಾನ ಮಾಡಿದರೂ ಈ ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಅಲ್ಲದೆ, 59 ಜಾತಿಗಳು ಪ್ರವರ್ಗ ‘ಎ’ಗೆ ನಿಗದಿಪಡಿಸಿದ ಶೇ 1ರಲ್ಲಿಯೇ ಮೀಸಲಾತಿ ಪಡೆಯಬೇಕಾಗಿದೆ.
ಪ್ರವರ್ಗ ‘ಎ’ಯಲ್ಲಿ ಸೇರಿಸಿರುವ ಜಾತಿಗಳಾದ ಅರುಂತಾತಿಯಾರ್ (ಜನಸಂಖ್ಯೆ 9,058) ಮತ್ತು ಚಕ್ಕಿಲಿಯನ್ (ಜನಸಂಖ್ಯೆ 909), ದಕ್ಕಲ, ದೊಕ್ಕಲ್ವರ್ (ಜನಸಂಖ್ಯೆ 124), ದಕ್ಕಲಿಗ (ಜನಸಂಖ್ಯೆ 1364), ಜಾಂಬುವುಲ್ (ಜನಸಂಖ್ಯೆ 556), ಸಿಂಧೊಳ್ಳು, ಚಿಂದೊಳ್ಳು (ಜನಸಂಖ್ಯೆ 5,337) ಈ ಸಮುದಾಯಗಳನ್ನು ಪ್ರವರ್ಗ ‘ಬಿ’ಯಲ್ಲಿ ಸೇರಿಸಬೇಕಾಗಿದೆ.
ಪ್ರವರ್ಗ ‘ಎ’ಯಲ್ಲಿರುವ ಚೆನ್ನದಾಸರ, ಹೊಲೆಯ ದಾಸರ (ಜನಸಂಖ್ಯೆ, 79,625), ಹೊಲರ್, ವಲ್ಹರ್ (ಜನಸಂಖ್ಯೆ 11,248) ಈ ಸಮುದಾಯಗಳನ್ನು ಪ್ರವರ್ಗ ‘ಸಿ’ಗೆ ಸೇರಿಸಬೇಕಾಗಿದೆ. ಪ್ರವರ್ಗ ‘ಸಿ’ಗೆ ಸೇರಬೇಕಾಗಿರುವ ಮೊಗೇರ್ (ಜನಸಂಖ್ಯೆ 87,117), ಪರೈಯನ್, ಪರಾಯ (ಜನಸಂಖ್ಯೆ 1,61,164) ಈ ಎರಡೂ ಸಮುದಾಯಗಳನ್ನು ಪ್ರವರ್ಗ ‘ಬಿ’ಯಲ್ಲಿ ಸೇರಿಸಲಾಗಿದೆ. ಇವು ಪ್ರವರ್ಗ ‘ಸಿ’ ಜಾತಿಗೆ ಸಮಾನಂತರವಾಗಿವೆ. ಈ ರೀತಿಯ ವಿವಿಧ ಜಾತಿಗಳನ್ನು ಬೇರೆ ಬೇರೆ ಪ್ರವರ್ಗಗಳಲ್ಲಿ ವಿಂಗಡಿಸಿರುವುದು ಕಂಡುಬರುತ್ತಿದೆ.
2011ರ ಜನಗಣತಿಯ ಪ್ರಕಾರ ಬೇಡ ಸಂಗಮ, ಬುಡಗ ಜಂಗಮ ಸಮುದಾಯದವರ ಜನಸಂಖ್ಯೆಯು 1,17,164. ಆದರೆ, ಸಮೀಕ್ಷೆಯಲ್ಲಿ ಈ ಸಮುದಾಯದ ಒಟ್ಟು ಜನಸಂಖ್ಯೆ 3,22,049. ಈ ಹೆಚ್ಚಳವು ಕೃತಕವಾಗಿದೆ ಎಂದು ತಿಳಿದು, ಒಟ್ಟು 1,44,387 ಜನರನ್ನು ಮಾತ್ರ ಪ್ರವರ್ಗ ‘ಎ’ಯಲ್ಲಿ ಸೇರಿಸಿ, ಉಳಿದ 1,77,662 ಜನಸಂಖ್ಯೆಯನ್ನು ಕೈಬಿಡಲಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಟಿಪ್ಪಣಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.