ಬೆಂಗಳೂರು: ಸಾಮಾಜಿಕ–ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು 15 ದಿನಗಳ ಅಲ್ಪಾವಧಿಯಲ್ಲಿ, ತರಾತುರಿಯಲ್ಲಿ ಮಾಡುವ ಹಟವನ್ನು ರಾಜ್ಯ ಸರ್ಕಾರ ಬಿಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ನೇತೃತ್ವದ ಬಿಜೆಪಿ ನಾಯಕರ ನಿಯೋಗ ಒತ್ತಾಯಿಸಿತು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯ್ಕ್ ಅವರನ್ನು ಸುನಿಲ್ ಕುಮಾರ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರ ನಿಯೋಗವು ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
‘15 ದಿನಗಳಲ್ಲಿ ಸಮೀಕ್ಷೆಯನ್ನು ನಡೆಸಲು ಸಾಧ್ಯವಿಲ್ಲ. ಹೆಚ್ಚು ಸಮಯ ತೆಗೆದುಕೊಂಡು ಕರಾರುವಾಕ್ಕಾಗಿ ದತ್ತಾಂಶ ಸಂಗ್ರಹಿಸಬೇಕು. ಸಮೀಕ್ಷೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಬೇಕು. ಯಾವುದೇ ಗೊಂದಲ ಮತ್ತು ಸಮಸ್ಯೆಗಳಿಗೆ ಅವಕಾಶ ಇರದಂತೆ ಎಚ್ಚರವಹಿಸಬೇಕು’ ಎಂದು ನಿಯೋಗವು ಕೋರಿದೆ.
ಭೇಟಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನಿಲ್ ಕುಮಾರ್, ‘ಆಯೋಗವು ಹೊರಡಿಸಿರುವ 1,400 ಜಾತಿಗಳ ಪಟ್ಟಿಯಲ್ಲಿ ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂದು ಹೊಸ ಜಾತಿಗಳನ್ನು ಸೇರಿಸಿದೆ. ಹಿಂದೂ ಜಾತಿಗಳ ಹೆಸರಿನ ಮುಂದೆ ಮುಸ್ಲಿಂ ಎಂದು ಸೇರಿಸಿ, ಹೊಸದಾಗಿ 107 ಜಾತಿಗಳನ್ನು ಸೃಷ್ಟಿಸಲಾಗಿದೆ. ಇದನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದೇವೆ’ ಎಂದರು.
‘ಈ ಜಾತಿಪಟ್ಟಿ ಮತ್ತು ಸಮೀಕ್ಷೆ ಮೂಲಕ ರಾಜ್ಯದ ಜನರಲ್ಲಿ ಒಡಕು ಮೂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿಂದಿನ ಆಯೋಗದ ಅಧ್ಯಕ್ಷರು ನೀಡಿದ್ದ ವರದಿಗಳನ್ನು ಕಸದಬುಟ್ಟಿಗೆ ಎಸೆಯಲಾಗಿದೆ. ಇದರಿಂದ ನೂರಾರು ಕೋಟಿ ವ್ಯರ್ಥವಾಗಿದೆ. ಈಗ ನಡೆಸುವ ಸಮೀಕ್ಷೆಗೂ ಇದೇ ಗತಿ ಬರಬಾರದು’ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್.ಪಾಟೀಲ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಎಸ್.ಕೇಶವಪ್ರಸಾದ್ ನಿಯೋಗದಲ್ಲಿ ಇದ್ದರು.
ಗೊಂದಲ ನಿವಾರಣೆಗೆ ಆಗ್ರಹ
ಈ ಸಮೀಕ್ಷೆಯ ಬಗ್ಗೆ ಸಾರ್ವಜನಿಕರಲ್ಲಿ ಹಲವು ಗೊಂದಲಗಳಿವೆ. ಅವುಗಳನ್ನು ಬಗೆಹರಿಸಿ ಎಂದು ಬಿಜೆಪಿ ನಿಯೋಗವು ಆಯೋಗವನ್ನು ಒತ್ತಾಯಿಸಿದೆ. ಬಿಜೆಪಿ ಪಟ್ಟಿ ಮಾಡಿರುವ ಕೆಲ ಗೊಂದಲಗಳು ಈ ಮುಂದಿನಂತಿವೆ
* ಒಳಮೀಸಲಾತಿಗಾಗಿ ನಡೆಸಿದ ಸಮೀಕ್ಷೆಯ ದತ್ತಾಂಶಗಳನ್ನು ಈ ಸಮೀಕ್ಷೆಯಲ್ಲಿ ಬಳಸಿಕೊಳ್ಳಲಾಗುತ್ತದೆಯೇ ಅಥವಾ ಮತ್ತೆ ಆ ಮನೆಗಳನ್ನೂ ಮತ್ತೆ ಸಮೀಕ್ಷೆಗೆ ಒಳಪಡಿಸಲಾಗುತ್ತದೆಯೇ?
* ಒಂದೇ ಮನೆಯಲ್ಲಿ 20ಕ್ಕೂ ಹೆಚ್ಚು ಜನರಿದ್ದರೆ ಅಂತಹ ಮನೆಗ ಸಮೀಕ್ಷೆ ಹೇಗೆ ಮಾಡುತ್ತೀರಿ?
* ಸಾರ್ವಜನಿಕರು ಕೊಡುವ ಮಾಹಿತಿಯನ್ನು ಹೇಗೆ ಖಚಿತಪಡಿಸಿಕೊಳ್ಳುತ್ತೀರಿ?
* ಸಮೀಕ್ಷೆಯ ಭಾಗವಾಗಿ ವಿದ್ಯುತ್ ಮೀಟರ್ ಅನ್ನು ಹೇಗೆ ಟ್ಯಾಗ್ ಮಾಡುತ್ತೀರಿ? ಅದರಿಂದ ಸಮೀಕ್ಷೆಗೆ ಆಗುವ ಉಪಯೋಗವೇನು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.