ಬೆಂಗಳೂರು: ಹಿಂದುಳಿದ ವರ್ಗಗಳ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಜಂಗಮ, ವೀರಶೈವ ಜಂಗಮ ಹಾಗೂ ವೀರಶೈವ ಆರಾಧ್ಯ ಹಾಗೂ ವೀರಶೈವ ಲಿಂಗಾಯತ ಜಂಗಮ ಜಾತಿಗಳಿಗೆ ಒಂದೇ ಕ್ರಮ ಸಂಖ್ಯೆ ನೀಡಬೇಕು ಎಂದು ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ ಆಗ್ರಹಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ನ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ‘ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸುವ ಉದ್ದೇಶದಿಂದ 1,400 ಜಾತಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ನಮ್ಮ ಜಾತಿಗಳನ್ನು ಬಿಟ್ಟು, ಬೇಡುವ ಜಂಗಮ, ಬೇಡುವ ಜಂಗಮ ಲಿಂಗಾಯತ, ಶಿರಿಯ ಜಂಗಮ, ಕ್ರಿಶ್ಚಿಯನ್ ಜಂಗಮ ಎಂಬ ಇಲ್ಲದ ಜಾತಿಗಳನ್ನು ಸೇರಿಸಲಾಗಿದೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ನಮ್ಮ ಜಾತಿಗೆ ಸೇರಿದ 20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದಲ್ಲಿ ಜಂಗಮರು, ಸ್ವಾಮಿಗಳು, ಅಯ್ಯನವರು, ಗುರುಗಳು ವೀರಶೈವ ಜಂಗಮರು, ವೀರಶೈವ ಲಿಂಗಾಯತ ಜಂಗಮರು ಎಂದರೆ, ಮೈಸೂರು ಭಾಗದಲ್ಲಿ ವೀರಶೈವ ಆರಾಧ್ಯರು ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ’ ಎಂದು ವಿವರಿಸಿದರು.
‘ಹಿಂದೂ ವರ್ಗಗಳ ಜಾತಿಗಳ ಪಟ್ಟಿಯಲ್ಲಿ ನಮ್ಮ ಜಾತಿಗಳನ್ನು ಸೇರಿಸುವಂತೆ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಲಾಗಿದೆ. ನಮ್ಮನ್ನು ಪಟ್ಟಿಯಿಂದ ಹೊರಗಡೆ ಇಟ್ಟರೆ ನಾವು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುವುದಿಲ್ಲ’ ಎಂದು ಹೇಳಿದರು.
ಪರಿಷತ್‌ನ ಕಾರ್ಯದರ್ಶಿ ಎಚ್.ಎಂ. ಹಿಮಾಚಲ, ಸದಸ್ಯರಾದ ಎ.ಸಿ. ಹಿರೇಮಠ, ಸತೀಶ್ ಸಿ. ಹಡಗಲಿಮಠ, ಕಾಶಿನಾಥ ಪತ್ರಿಮಠ, ಕೆ.ಎಂ. ಚೆನ್ನಮಲ್ಲಯ್ಯ, ಬಸವರಾಜ ಸಂಗಮೇಶಮಠ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.