
ಅರವಿಂದ ಬೆಲ್ಲದ
ವಿಜಯಪುರ: ‘ಜಾತಿ ಜನ ಗಣತಿ ವೇಳೆ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತರು ಹಿಂದೂ ಎಂದೇ ಬರೆಯಿಸಿ’ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮನವಿ ಮಾಡಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಂಕರ ಬಿದರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದೂ ಎಂದೇ ಬರೆಯುವಂತೆ ತೀರ್ಮಾನಿಸಲಾಗಿತ್ತು. ಆಗ ಸಚಿವ ಖಂಡ್ರೆ ಸಹ ಒಮ್ಮತ ಸೂಚಿಸಿದ್ದರು. ಆದರೆ, ಈಗ ಯೂಟರ್ನ್ ಹೊಡೆದಿದ್ದಾರೆ, ಧರ್ಮದ ಕಾಲಂನಲ್ಲಿ ವಿರಶೈವ ಲಿಂಗಾಯತ ಬರೆಯಿರಿ ಎಂದು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ' ಎಂದು ಆರೋಪಿಸಿದರು.
ಒಂದಾಗಬೇಕು:
‘ರಾಜ್ಯದಲ್ಲಿ ಬಿಜೆಪಿ ಸಧೃಡವಾಗಲು ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಒಂದಾಗಬೇಕು. ಪಕ್ಷ ಗಟ್ಟಿಗೊಳ್ಳಲು ಎಲ್ಲರೂ ಕೈಜೋಡಿಸಬೇಕು, ಉಚ್ಛಾಟಿತರನ್ನು ಪಕ್ಷಕ್ಕೆ ಕರೆ ತರುವುದು, ಬಿಡುವುದು ಹೈಕಮಾಂಡ್ ನಿರ್ಧಾರ. ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ನಾವು ಸದಾ ಬದ್ಧ’ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ನಿರ್ಧಾರ, ಇದರ ಬಗ್ಗೆ ನಾನೇನು ಹೇಳಲು ಸಾಧ್ಯ ಎಂದರು.
ಹಾಸನದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ದುರ್ಘಟನೆಗೆ ಗಾಂಜಾ ಮತ್ತಿನಲ್ಲಿದ್ದ ಚಾಲಕನೇ ಕಾರಣ, ಎಲ್ಲರಿಗೂ ಹೇರಳವಾಗಿ ಗಾಂಜಾ ದೊರೆಯುವಂತೆ ಮಾಡಿದ್ದು ಯಾರು? ರಾಜ್ಯ ಸರ್ಕಾರ ಪೊಲೀಸರ ವರ್ಗಾವಣೆಗೆ ಕೋಟಿ ಕೋಟಿ ಅಕ್ರಮ ಹಣ ಪಡೆದುಕೊಳ್ಳುತ್ತಿದೆ, ಹೀಗಾಗಿ ಈ ರೀತಿ ಹಣ ಕೊಟ್ಟು ಬಂದ ಪೊಲೀಸರು ಗಾಂಜಾ ಮೊದಲಾದ ಅಕ್ರಮಗಳಿಗೆ ಅವಕಾಶ ನೀಡುತ್ತಾರೆ, ಇದರಿಂದಾಗಿಯೇ ವ್ಯವಸ್ಥೆ ಹಾಳಾಗಿ ಹೋಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಹಿಂದೂ ವೋಟ್ ಬ್ಯಾಂಕ್ ಒಡೆಯುವ ಪ್ರಯತ್ನ ಮಾಡುತ್ತಿದೆ. ಸಾಮಾಜಿಕ, ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ, ಹಿಂದೂ ದೇವಾಲಯಗಳ ಮೇಲೆ ಎಸ್‌ಐಟಿ ತನಿಖೆ ಮಾಡುತ್ತಿದೆ. ಈ ರೀತಿ ಹಿಂದು ವಿರೋಧಿಯಾಗಿ ಕೆಲಸ ಮಾಡುತ್ತಿದೆ, ಈ ಹಿಂದೆ ಲಿಂಗಾಯತ ಧರ್ಮ ವಿಚಾರವಾಗಿ ಕಾಂಗ್ರೆಸ್ ಪೆಟ್ಟು ತಿಂದಿದೆ, ಈ ಬಾರಿಯೂ ಅವರಿಗೆ ಪೆಟ್ಟು ಬೀಳುವುದು ನಿಶ್ಚಿತ ಎಂದರು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮುಖಂಡರಾದ ಸುರೇಶ ಬಿರಾದಾರ, ಸಂದೀಪ ಪಾಟೀಲ, ಶಿವು ಹಿರೇಮಠ, ಭೀಮಾಶಂಕರ ಹದನೂರ, ವಿಜಯ ಜೋಶಿ, ಮಲ್ಲಮ್ಮ ಜೋಗೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.