ADVERTISEMENT

ಜಾತಿವಾದಿ, ಕೋಮುವಾದಿ ಚಿಂತನೆ ವಿಪರೀತ; ದೇಶಕ್ಕೆ ಭವಿಷ್ಯವಿದೆಯೇ?: ಮರುಳಸಿದ್ದಪ್ಪ

‘ದೇಶದಲ್ಲಿ ಜಾತಿವಾದಿ, ಕೋಮುವಾದಿ, ಸ್ತ್ರೀವಿರೋಧಿ ಚಿಂತನೆ ವಿಪರೀತ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 15:43 IST
Last Updated 15 ನವೆಂಬರ್ 2025, 15:43 IST
ಕೆ.ಮರುಳಸಿದ್ದಪ್ಪ
ಕೆ.ಮರುಳಸಿದ್ದಪ್ಪ   

ಬೆಂಗಳೂರು: ‘ಭಾರತದಲ್ಲಿ ಈಗ ಜಾತಿವಾದಿ, ಕೋಮುವಾದಿ ಮತ್ತು ಸ್ತ್ರೀವಿರೋಧಿ ಚಿಂತನೆಗಳು ತೀವ್ರವಾಗಿದ್ದು, ಈ ದೇಶಕ್ಕೆ ಭವಿಷ್ಯವಿದೆಯೇ ಎಂಬ ಆತಂಕ ಕಾಡುತ್ತಿದೆ’ ಎಂದು ಸಾಹಿತಿ ಕೆ.ಮರುಳಸಿದ್ದಪ್ಪ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ತಿಂಗಳ ಅತಿಥಿಯಾಗಿದ್ದ ಅವರು, ‘ನಾನು ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲು ಹುಟ್ಟಿದವನು. ಅಲ್ಲಿಂದ ಈವರೆಗೆ ಸಮಾಜ ಹೇಗೆ ಬದಲಾವಣೆ ಆಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದೇನೆ’ ಎಂದರು.

‘ನಾನು ಹುಟ್ಟಿದ ಕಾರೇಹಳ್ಳಿಯು ಬುಡಕಟ್ಟು ಸಮುದಾಯದವರು, ಅಸ್ಪೃಶ್ಯರು, ಪ್ರಬಲ ಜಾತಿಗಳು ಇದ್ದ ಊರು. ಅದನ್ನೊಂದು ಮಿನಿ ಕರ್ನಾಟಕ ಎನ್ನಬಹುದಿತ್ತು. 100 ಮನೆಗಳಿದ್ದ ಆ ಊರಿನಲ್ಲಿ 10 ಮನೆ ಲಿಂಗಾಯತರದ್ದು, ಅದರಲ್ಲಿ ನಮ್ಮ ಮತ್ತು ನಮ್ಮ ದಾಯಾದಿಗಳ ಮನೆಯೇ ನಾಲ್ಕು ಇದ್ದವು. ಈ ನಾಲ್ಕು ಮನೆಗಳೇ ಊರಿನ ಅರ್ಧಕ್ಕೂ ಹೆಚ್ಚು ಜಮೀನನ್ನು ಲಪಟಾಯಿಸಿದ್ದವು’ ಎಂದರು.

ADVERTISEMENT

‘ಜಮೀನ್ದಾರಿ ಮನಃಸ್ಥಿತಿಯ ಕುಟುಂಬದಲ್ಲಿ ಹುಟ್ಟಿದ ಕಾರಣಕ್ಕೆ ಇತರ ಸಮುದಾಯಗಳ ಹುಡುಗರ ಜತೆಗೆ ಬೆರೆಯುವ ಅವಕಾಶವೇ ಸಿಗಲಿಲ್ಲ. ನನ್ನ ಬಾಲ್ಯದ ನೆನಪುಗಳು ಅಷ್ಟು ಚೆನ್ನಾಗಿಲ್ಲ. ಕಾಲೇಜಿಗೆಂದು ಮೈಸೂರಿಗೆ ಮತ್ತು ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದ ನಂತರವೇ ಜಾತ್ಯತೀತ ವಾತಾವರಣಕ್ಕೆ ನಾನು ತೆರೆದುಕೊಂಡಿದ್ದು. ವೃತ್ತಿ ಜೀವನದ ಉದ್ದಕ್ಕೂ ನಾನು ಜಾತ್ಯತೀತನಾಗಿಯೇ ಇದ್ದೆ’ ಎಂದು ವಿವರಿಸಿದರು.

‘ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ನೀತಿಯ ಕಾರಣಕ್ಕೆ ದೇಶವು ಜಮೀನ್ದಾರಿ ಸ್ಥಿತಿಯಿಂದ ಸಮಾಜವಾದಿ ಸಮಾಜವಾಗಿ ಬದಲಾಗುತ್ತಿತ್ತು. ಅವರು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಅಣೆಕಟ್ಟೆಗಳು ಮತ್ತು ಕಾರ್ಖಾನೆಗಳನ್ನು ನಿರ್ಮಿಸಿದರು ಮತ್ತು ಆ ಮೂಲಕ ದೇಶ ಕಟ್ಟಿದರು. ತೀರಾ ಈಚಿನವರೆಗೂ ನಮ್ಮ ಸಮಾಜ ಜಾತ್ಯತೀತವಾಗಿತ್ತು ಮತ್ತು ಕೋಮುವಾದ, ಜಾತಿವಾದ ಮತ್ತು ಸ್ತ್ರೀವಿರೋಧಿ ಚಿಂತನೆಗಳು ಅಷ್ಟಾಗಿ ಕಾಣುತ್ತಿರಲಿಲ್ಲ. ಆದರೆ ಈಚಿನ ದಶಕದಲ್ಲಿ ಈ ಎಲ್ಲವೂ ವಿಪರೀತ ಎನಿಸುವಷ್ಟು ಹೆಚ್ಚಾಗಿವೆ’ ಎಂದರು.

‘ನಮ್ಮ ತಲೆಮಾರಿನವರು ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದೇವೆ. ಹೊಸ ತಲೆಮಾರಿಗೆ ಇವೆಲ್ಲಾ ಅರ್ಥವಾಗುತ್ತಿಲ್ಲ. ಈ ಸಮಾಜ, ದೇಶ ಎಲ್ಲಿಗೆ ಹೋಗುತ್ತದೆ ಎಂಬುದೂ ಗೊತ್ತಾಗದಂತಾಗಿದೆ. ಕರುನಾಡು ಬಾ ಬೆಳಕೆ/ ಮುಸುಕಿದೀ ಮಬ್ಬಿನಲಿ/ ಕೈಹಿಡಿದು ನಡೆಸೆನ್ನನು ಎಂದು ಪ್ರಾರ್ಥಿಸುವುದು ಬಿಟ್ಟು ಬೇರೇನೂ ಮಾಡಲಾಗದು’ ಎಂದು ಅಸಹಾಯಕತೆ ತೋಡಿಕೊಂಡರು.

ನಾನು ಮೆಚ್ಚುವ ಪ್ರಧಾನಿಗಳಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸಹ ಒಬ್ಬರು. ಆದರೆ ಅವರ ಪಕ್ಷ ಮತ್ತು ಅವರು ನಂಬುತ್ತಿದ್ದ ಆರ್‌ಎಸ್‌ಎಸ್‌ನ ಸಿದ್ದಾಂತದ ಕಡುವಿರೋಧಿ ನಾನು
ಕೆ.ಮರುಳಸಿದ್ದಪ್ಪ ಸಾಹಿತಿ