ಬೆಂಗಳೂರು: ‘ನನ್ನ ಸರ್ಕಾರದ ಅವಧಿಯಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸುವ ನನ್ನ ನಿರ್ಧಾರ ಅಚಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಎಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆಯೇ (ಜಾತಿಗಣತಿ) ಅವೈಜ್ಞಾನಿಕವಾಗಿದ್ದು, ಅದನ್ನು ಸ್ವೀಕರಿಸಬಾರದು ಎಂದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ಪ್ರತಿನಿಧಿಸುವ ಸಂಘಟನೆಗಳು ಆಗ್ರಹಪಡಿಸುತ್ತಿವೆ. ಮುಖ್ಯಮಂತ್ರಿ ಅವರನ್ನು ಮಂಗಳವಾರ ಭೇಟಿ ಮಾಡಿದ್ದ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸಮುದಾಯದ ಸ್ವಾಮೀಜಿಗಳು, ರಾಜಕೀಯ ನೇತಾರರು ಸಹಿ ಹಾಕಿರುವ ಆಕ್ಷೇಪ ಪತ್ರವನ್ನು ನೀಡಿದ್ದರು. ಈ ಪತ್ರಕ್ಕೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಸಿ. ಸುಧಾಕರ್, ಎನ್. ಚಲುವರಾಯಸ್ವಾಮಿ ಕೂಡ ಸಹಿ ಮಾಡಿದ್ದಾರೆ.
ಈ ಬೆಳವಣಿಗೆಗಳ ಬೆನ್ನಲ್ಲೇ, ತಮ್ಮ ‘ಎಕ್ಸ್’ ಖಾತೆಯಲ್ಲಿ ಜಾತಿಗಣತಿ ವರದಿ ಬಗೆಗಿನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ‘ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ನಿಲುವಿಗೆ ನನ್ನ ಸಹಮತವಿದೆ. ದೇಶದಾದ್ಯಂತ ಜಾತಿಗಣತಿ ನಡೆದು, ಅದರ ವರದಿಯ ಆಧಾರದ ಮೇಲೆ ‘ಸರ್ವರಿಗೂ ಸಮಪಾಲು - ಸರ್ವರಿಗೂ ಸಮಬಾಳು’ ದಕ್ಕಿದಾಗಲೇ ದೇಶಕ್ಕೆ ದೊರೆತ ಸ್ವಾತಂತ್ರ್ಯ ಸಾರ್ಥಕವಾಗಲಿದೆ ಎಂಬುದು ನನ್ನ ಭಾವನೆ. ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಡೆಸಿದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.