ಬೆಂಗಳೂರು: ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಾರದು ಎಂದು ಕರೆ ನೀಡುವುದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾದುದು ಎಂದು ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯ್ಕ್ ತಿಳಿಸಿದ್ದಾರೆ.
‘ರಾಜ್ಯದ ಪ್ರತಿಯೊಬ್ಬರನ್ನೂ ಈ ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ/ಕುಟುಂಬಗಳ ಸ್ವಯಂ ಇಚ್ಛೆಗೆ ಬಿಡಲಾಗಿದೆ. ಮಾಹಿತಿಯನ್ನು ನೀಡುವ ಬಗ್ಗೆ ಆಯೋಗ ಒತ್ತಾಯ ಮಾಡುತ್ತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿರುವ ಕೆಲವು ಜನಪ್ರತಿನಿಧಿಗಳು, ತಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಹಾಗೂ ಸಾರ್ವಜನಿಕರೂ ಸಹ ಭಾಗವಹಿಸಬಾರದು ಎಂದು ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹೇಳಿಕೆಗಳು ಸಮೀಕ್ಷೆಯಲ್ಲಿ ಜನರು ಭಾಗವಹಿಸದಂತೆ ಪ್ರಚೋದಿಸುತ್ತಿವೆ. ಸಾರ್ವಜನಿಕ ಹಿತಕ್ಕಾಗಿ ಕೈಗೊಳ್ಳಲಾದ ಸಮೀಕ್ಷೆಯ ಉದ್ದೇಶಕ್ಕೆ ವಿರುದ್ಧವಾಗಿವೆ. ಯಾವುದೇ ಬಲವಂತವಿಲ್ಲದೆ ಸ್ವಇಚ್ಛೆಯಿಂದ ಜನರು ಭಾಗವಹಿಸುತ್ತಿರುವ ಸಂದರ್ಭದಲ್ಲಿ ಅದನ್ನು ತಡೆಯುವ ಹೇಳಿಕೆಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ’ ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ ತಪ್ಪು ಸಂದೇಶ ತಲುಪುವ ಸಾಧ್ಯತೆ ಇರುವ ಇಂಥ ಹೇಳಿಕೆಗಳನ್ನು ನೀಡದಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.