ADVERTISEMENT

ಸಾಮಾಜಿಕ –ಶೈಕ್ಷಣಿಕ ಸಮೀಕ್ಷೆ 'ಆಧಾರ್' ಆಧಾರ: ಆಸಕ್ತಿಕರ ಅಂಶಗಳು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 8:30 IST
Last Updated 20 ಸೆಪ್ಟೆಂಬರ್ 2025, 8:30 IST
   
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ’ಗೆ ಆಧಾರ್ ಸಂಖ್ಯೆಯೇ ಆಧಾರ. ಸಮೀಕ್ಷೆಗೆ ಒಳಪಡುವವರು ತಮ್ಮ ಪಡಿತರ ಚೀಟಿ ವಿವರ ಅಥವಾ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಇವೆರಡೂ ಲಭ್ಯವಿಲ್ಲದೇ ಇದ್ದರೆ, ಆಧಾರ್ ನೀಡಬಹುದು.
  • ಯಾವುದೇ ಕುಟುಂಬದ ಸದಸ್ಯ ವಿದೇಶದಲ್ಲಿ ವಾಸವಿದ್ದರೆ, ಅವರ ವಿವರಗಳನ್ನು ಸಂಗ್ರಹಿಸಲೂ ಅವಕಾಶವಿದೆ. ಅಂತಹವರು ಯಾವ ಕಾರಣದಿಂದ ವಿದೇಶದಲ್ಲಿದ್ದಾರೆ, ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆಯೇ ಅಥವಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆಯೇ ಮೊದಲಾದ ವಿವರಗಳನ್ನು ಸಂಗ್ರಹಿಸಲಾಗುತ್ತದೆ

  • ಸಮೀಕ್ಷೆಗೆ ಒಳಪಡುವವರು ಒಟ್ಟು 24 ಸ್ವರೂಪದ ಚರಾಸ್ತಿಗಳ ವಿವರ ಒದಗಿಸಲು ಅವಕಾಶವಿದೆ. ಸೈಕಲ್‌, ದ್ವಿಚಕ್ರ ವಾಹನ, ಕಾರುಗಳು, ರೆಫ್ರಿಜರೇಟರ್‌, ವಾಷಿಂಗ್‌ ಮಷೀನ್‌, ಅಡಿಕೆ–ತೆಂಗು ಸುಲಿಯುವ ಯಂತ್ರಗಳ ವಿವರ ನೀಡುವುದಲ್ಲದೆ, ತಮ್ಮಲ್ಲಿರುವ ಚಿನ್ನ–ಬೆಳ್ಳಿಯ ಆಭರಣಗಳ ವಿವರವನ್ನೂ ಒದಗಿಸಬೇಕು

  • ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳ ವಿವರಗಳನ್ನು ಸಂಗ್ರಹಿಸಲೂ ಸಮೀಕ್ಷೆಯ ಆ್ಯಪ್‌ನಲ್ಲಿ ಅವಕಾಶವಿದೆ. ಇವರನ್ನು ಅಸಂಘಟಿತ ವಲಯದ ಉದ್ಯೋಗಿಗಳು ಎಂದು ವರ್ಗೀಕರಿಸಲಾಗಿದೆ

    ADVERTISEMENT
  • ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕ್‌ಇಟ್‌ನಂತಹ ಡೆಲಿವರಿ ಸೇವೆಗಳಲ್ಲಿ ಇರುವವರು, ಓಲಾ–ಉಬರ್‌ನಂತಹ ಆ್ಯಪ್‌ ಆಧಾರಿತ ಚಾಲಕ ವೃತ್ತಿಯಲ್ಲಿ ಇರುವವರನ್ನು ಗಿಗ್‌ ವರ್ಕರ್‌ಗಳು ಎಂದು ವರ್ಗೀಕರಿಸಲಾಗಿದೆ

  • ಸಮೀಕ್ಷೆಗೆ ಒಳಪಡುವವರು ಅಂಗವಿಕಲರಾಗಿದ್ದಲ್ಲಿ, ಅಂಗ ವೈಕಲ್ಯದ ಸ್ವರೂಪ, ದೈನಂದಿನ ಚಟುವಟಿಕೆಗಳಿಗಾಗಿ ಅವರು ಬಳಸುವ ವಸ್ತುಗಳು, ಚಿಕಿತ್ಸೆ ವಿವರಗಳನ್ನೂ ಸಂಗ್ರಹಿಸಲಾಗುತ್ತದೆ. ಸರ್ಕಾರವು ನೀಡಿರುವ ಯುಡಿಐಡಿ ಸಂಖ್ಯೆ ಮತ್ತು ವಿವರಗಳನ್ನು ಪಡೆಯಲಾಗುತ್ತದೆ

  • ನಾಗರಿಕರ ಮತದಾರರ ಗುರುತಿನ ಚೀಟಿ (ಎಪಿಕ್‌) ವಿವರಗಳನ್ನೂ ಪಡೆಯಲಾಗುತ್ತದೆ. ಎಪಿಕ್‌ ಚೀಟಿ ಇಲ್ಲದಿದ್ದರೆ, ನೋಂದಣಿ ಏಕೆ ಮಾಡಿಸಿಲ್ಲ ಅಥವಾ ಮುಂದೆ ಮಾಡಿಸುತ್ತಾರಾ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ

  • ಗ್ಯಾರಂಟಿ ಯೋಜನೆಗಳ ಫಲಾನುಭವಿ ಆಗಿದ್ದರೆ, ಅದನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಬೇಕಿದೆ. ಗೃಹ ಲಕ್ಷ್ಮೀ ಯೋಜನೆ ಅಡಿ ಕುಟುಂಬದ ಯಜಮಾನಿ ಪಡೆಯುತ್ತಿರುವ ಮಾಸಿಕ ₹2,000ವನ್ನು, ಕುಟುಂಬದ ವಾರ್ಷಿಕ ಆದಾಯಕ್ಕೆ ಸೇರಿಸಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ

  • ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವ ಅಪ್ಲಿಕೇಷನ್‌ ಮೂಲಕ ದತ್ತಾಂಶ ಸಂಗ್ರಹ. ನೆಟ್‌ವರ್ಕ್‌ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ರೀತಿಯಲ್ಲಿ ಅಪ್ಲಿಕೇಷನ್‌ ಅಭಿವೃದ್ಧಿ. ದತ್ತಾಂಶ ಮೊಬೈಲ್‌ನಲ್ಲಿ ಸಂಗ್ರಹವಾಗಿ, ನೆಟ್‌ವರ್ಕ್‌ ಲಭ್ಯವಾಗುತ್ತಿದ್ದಂತೆಯೇ ಅಪ್‌ಲೋಡ್‌ ಆಗುತ್ತದೆ

  • ಕುಟುಂಬಗಳ ಸಾಲದ ವಿವರವನ್ನು ಸಮೀಕ್ಷೆ ವೇಳೆ ಕಲೆಹಾಕಲಾಗುತ್ತದೆ. ಸಾಲದ ಮೂಲ, ಯಾವ ಕಾರಣಕ್ಕಾಗಿ ಸಾಲ ಪಡೆಯಲಾಗಿದೆ, ಸಾಲದ ಸ್ವರೂಪದ ವಿವರ ಕೇಳಲಾಗುತ್ತದೆ. ಬ್ಯಾಂಕ್‌ಗಳಿಂದ ಸಾಲ ಪಡೆಯಲಾಗಿದೆಯೇ, ಕೈಸಾಲವೇ, ಮೈಕ್ರೊ ಫೈನಾನ್ಸ್‌ನಿಂದ ಪಡೆದ ಸಾಲವೇ ಅಥವಾ ಸಹಕಾರ ಸಂಘದ ಸಾಲವೇ ಎಂಬ ವಿವರಗಳನ್ನು ನೀಡಬೇಕಾಗುತ್ತದೆ

  • ಸಮೀಕ್ಷೆಗೆ ಒಳಪಡುವವರು ತಮ್ಮ ಮತ್ತು ಕುಟುಂಬದ ವಾರ್ಷಿಕ ಆದಾಯದ ವಿವರವನ್ನು ನೀಡಬೇಕಾಗುತ್ತದೆ. ಆದಾಯ ತೆರಿಗೆ ಪಾವತಿದಾರರೇ ಎಂಬುದನ್ನೂ ತಿಳಿಸಬೇಕಾಗುತ್ತದೆ. ಆದರೆ ಆದಾಯಕ್ಕಾಗಲೀ, ಆದಾಯ ತೆರಿಗೆ ಪಾವತಿ ಸಂಬಂಧವಾಗಲೀ ಯಾವುದೇ ದಾಖಲೆ ನೀಡಬೇಕಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.