ADVERTISEMENT

24 ಟಿಎಂಸಿ ಅಡಿ ಕಾವೇರಿ ನೀರು ಬೆಂಗಳೂರಿಗೆ ಮೀಸಲು: ಜಲ ಸಂಪನ್ಮೂಲ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 15:55 IST
Last Updated 8 ನವೆಂಬರ್ 2023, 15:55 IST
<div class="paragraphs"><p>ಕಾವೇರಿ ನೀರು</p></div>

ಕಾವೇರಿ ನೀರು

   

ನವದೆಹಲಿ: ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕಾಗಿ ವಾರ್ಷಿಕವಾಗಿ 24 ಟಿಎಂಸಿ ಅಡಿ ಕಾವೇರಿ ನೀರನ್ನು ಮೀಸಲು ಇರಿಸಲು ಮತ್ತು ಅದನ್ನು ಜಲ ಮಂಡಳಿ ಬಳಸಿಕೊಳ್ಳಬೇಕು ಎಂದು ಜಲ ಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ. 

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಈ ವಿಷಯ ತಿಳಿಸಿದರು. 

ADVERTISEMENT

‘ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 24 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ 2018ರಲ್ಲಿ ತಿಳಿಸಿತ್ತು. ಆದರೆ, ಇದುವರೆಗೂ ಯಾರೂ ಈ ವಿಚಾರವಾಗಿ ಕ್ರಮ ತೆಗೆದುಕೊಂಡಿರಲಿಲ್ಲ. ಈ ಮೊದಲು ಕಡಿಮೆ ನೀರು ನಿಗದಿ ಮಾಡಲಾಗಿತ್ತು. ಈಗ ಉಳಿಕೆ 6 ಟಿಎಂಸಿ ನೀರನ್ನು ಬಳಸಿಕೊಂಡು, ಒಟ್ಟಾರೆ ಕುಡಿಯುವ ಉದ್ದೇಶಕ್ಕೆ 24 ಟಿಎಂಸಿ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸಲು ಜಲ ಮಂಡಳಿಗೆ ಸೂಚಿಸಲಾಗಿದೆ’ ಎಂದರು. 

‘ಮೇಕೆದಾಟು ಯೋಜನೆ ಪ್ರಾರಂಭ ಮಾಡಲು ಅನುಮತಿ ನೀಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡುತ್ತೇವೆ. ಸಂಕಷ್ಟದ ಸಂದರ್ಭದಲ್ಲಿ ನೀರು ಹರಿಸಲು ಈ ಯೋಜನೆ ಸಹಕಾರಿಯಾಗುತ್ತದೆ. ಅಲ್ಲದೇ ತಮಿಳುನಾಡಿಗೆ ಈ ಯೋಜನೆಯಿಂದ ಹೆಚ್ಚು ಪ್ರಯೋಜನವಿದೆ’ ಎಂದರು. 

‘ಸಂಕಷ್ಟಕಾಲದಲ್ಲೂ 300- 400 ಟಿಎಂಸಿ ಅಡಿ ನೀರು ಬಿಡಬೇಕು ಎಂದು ತಮಿಳುನಾಡಿನವರು ಕೇಳಿದ್ದರು. ಕೆಆರ್‌ಎಸ್‌ಗೆ ಒಳಹರಿವು ಸಂಪೂರ್ಣವಾಗಿ ನಿಂತೇ ಹೋಗಿದೆ. ಇದನ್ನು ಮನದಟ್ಟು ಮಾಡಿಕೊಡಲು ನಿರ್ಧಾರ ಮಾಡಿದ್ದೇವೆ’ ಎಂದು ಅವರು ಹೇಳಿದರು. 

‘ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ. ಸುಪ್ರೀ ಕೋರ್ಟ್ ಕೊಟ್ಟಿರುವ ಆದೇಶ ಪಾಲಿಸುತ್ತಿದ್ದೇವೆ. ತಮಿಳುನಾಡಿನವರು ಏನಾದರೂ ಆಕ್ಷೇಪ ವ್ಯಕ್ತಪಡಿಸಲಿ, ನಮ್ಮ ಹಕ್ಕನ್ನು ನಾವೇಕೆ ಬಿಟ್ಟು ಕೊಡಬೇಕು. ಈ ಹಿಂದೆ ನೀಡಿರುವ ಆದೇಶವನ್ನೇ ಈಗ ಪಾಲಿಸುತ್ತಿದ್ದೇವೆ. ಕೆಆರ್‌ಎಸ್‌ ಅಥವಾ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಭಾಗದಲ್ಲಾದರೂ ಇಷ್ಟು ಪ್ರಮಾಣದ ನೀರನ್ನು ನಾವು ಮೀಸಲಿರಿಸುತ್ತೇವೆ’ ಎಂದು ಅವರು ಉತ್ತರಿಸಿದರು.

ಮೇಕೆದಾಟು ವಿಚಾರದ ಕುರಿತು ಮುಂದಿನ ವಾರ ಚರ್ಚೆ ಮಾಡೋಣ ಎಂದು ಪ್ರಾಧಿಕಾರ ತಿಳಿಸಿದೆ. ಅವರ ಮುಂದೆ ವಿಚಾರ ಮಂಡಿಸಲು ಎಲ್ಲ ರೀತಿಯ ಸಿದ್ದತೆ  ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರು ಬೆಳೆಯುತ್ತಿದೆ. ಮುಂದಿನ 20 ವರ್ಷವನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕು. ಆನೇಕಲ್, ಹಾರೋಹಳ್ಳಿ, ಬೆಂಗಳೂರು ಉತ್ತರ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ನೀರು ಕೊಡಲೇಬೇಕು ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.