ADVERTISEMENT

ಸಂತೋಷ್ ವಿರುದ್ಧದ ಅಪಹರಣ ಯತ್ನ ಆರೋಪ ಪ್ರಕರಣ ಸಿಸಿಬಿ ವರ್ಗಾವಣೆಗೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 8:51 IST
Last Updated 5 ಮಾರ್ಚ್ 2019, 8:51 IST
   

ಬೆಂಗಳೂರು:ಬಿಜೆಪಿಯ ಹಿರಿಯ ಮುಖಂಡ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಬೆಂಬಲಿಗ ವಿನಯ್ ಅಪಹರಣ ಯತ್ನ ಆರೋಪ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್. ಸಂತೋಷ್ ವಿರುದ್ಧದ ಸಿಸಿಬಿ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ಸಂತೋಷ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

"ನಗರ ಪೊಲೀಸ್ ಕಮಿಷನರ್ ಅವರ ಅನುಮೋದನೆ ಮೇರೆಗೆ ಪೊಲೀಸ್ ಉಪ ಆಯುಕ್ತರು ಹೊರಡಿಸಿರುವ ಆದೇಶಕ್ಕೆ ನ್ಯಾಯಪೀಠ ಅನಿರ್ದಿಷ್ಟ ಅವಧಿವರಗೆ ತಡೆ ನೀಡಿದೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, "ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇ ಔಟ್ ಠಾಣೆ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ 2019ರ ಜನವರಿ 24ರಂದು ನಗರ ಪೊಲೀಸ್ ಉಪ ಆಯುಕ್ತರು ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ ಆದೇಶಿಸಿದ್ದಾರೆ‌‌. ಅರ್ಜಿದಾರರು ತನಿಖೆಗೆ ಹಾಜರಾಗುವಂತೆ ಫೆ.5ರಂದು ನೋಟಿಸ್ ನೀಡಲಾಗಿದೆ. ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿರುವುದಕ್ಕೆ ಸೂಕ್ತ ಕಾರಣ ನೀಡಿಲ್ಲ" ಎಂದು ಆಕ್ಷೇಪಿಸಿದರು.

"ಪೊಲೀಸ್ ಉಪ ಆಯುಕ್ತರ ಆದೇಶವನ್ನು ರದ್ದು ಗೊಳಿಸಬೇಕು" ಎಂದು ಕೋರಿದರು.

ಪ್ರಕರಣವೇನು?

ತಮ್ಮ ಅಪಹರಣಕ್ಕೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಎಸ್.ಈಶ್ವರಪ್ಪ ಅವರ ಬೆಂಬಲಿಗ ವಿನಯ್ ಅವರು, ಅಪರಿಚಿತ ವ್ಯಕ್ತಿಗಳ ವಿರುದ್ಧ ಮಹಾಲಕ್ಷ್ಮೀ ಲೇ ಔಟ್ ಠಾಣೆ ಪೊಲೀಸರಿಗೆ 2017ರ ಮೇ 11 ರಂದು ದೂರು ನೀಡಿದ್ದರು.

ಇದರ ಅನುಸಾರ ಪೊಲೀಸರುಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿ ನಗರದ ಸೆಷನ್ಸ್ ಕೋರ್ಟ್ ಗೆ 2018 ರ ಡಿಸೆಂಬರ್ 17ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.