ADVERTISEMENT

ಸಿ.ಡಿ ಪ್ರಕರಣ: ಜ್ವರದ ಕಾರಣ ಕೊಟ್ಟು ರಮೇಶ ಗೈರು

ಸಂತ್ರಸ್ತೆಗೆ ಮೊಬೈಲ್‌ ಕೊಡಿಸಿದ್ದ ಶಾಸಕ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:23 IST
Last Updated 2 ಏಪ್ರಿಲ್ 2021, 19:23 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿಎಸ್‌ಐಟಿ ಅಧಿಕಾರಿಗಳ ಎದುರು ಶುಕ್ರವಾರ ಬೆಳಿಗ್ಗೆ ಹಾಜರಾಗಬೇಕಿದ್ದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾದರು.

ಸಂತ್ರಸ್ತೆಯ ವಿಚಾರಣೆ ಮುಂದುವರಿಸಿರುವ ಎಸ್‌ಐಟಿ ಅಧಿಕಾರಿಗಳು ಮತ್ತಷ್ಟು ಮಾಹಿತಿ ಕಲೆ ಹಾಕಿದರು.

ಸಂತ್ರಸ್ತೆ ಹೇಳಿಕೆ ಆಧರಿಸಿ, ಅತ್ಯಾಚಾರ ನಡೆದಿದೆ ಎನ್ನಲಾದ ಸ್ಥಳ ಹಾಗೂ ಸಂತ್ರಸ್ತೆ ವಾಸವಿದ್ದ ಕೊಠಡಿಯಲ್ಲಿ ತನಿಖಾಧಿಕಾರಿ ಎಂ.ಸಿ. ಕವಿತಾ ಗುರುವಾರ ಮಹಜರು ಮಾಡಿದ್ದರು. ಶುಕ್ರವಾರ ಬೆಳಿಗ್ಗೆ ವಿಚಾರಣೆಗೆ ಬರುವಂತೆ ರಮೇಶ ಜಾರಕಿಹೊಳಿ ಹಾಗೂ ಸಂತ್ರಸ್ತೆಗೆ ನೋಟಿಸ್ ನೀಡಿದ್ದರು. ಆರಂಭದಲ್ಲಿ ಇಬ್ಬರಿಂದಲೂ ಪ್ರತ್ಯೇಕವಾಗಿ ಹೇಳಿಕೆ ಪಡೆದು, ನಂತರ ಮುಖಾಮುಖಿ ಹೇಳಿಕೆ ದಾಖಲಿಸಿಕೊಳ್ಳಲು ತನಿಖಾ ತಂಡ ತೀರ್ಮಾನಿಸಿತ್ತು.

ADVERTISEMENT

ನಿಗದಿತ ಸಮಯಕ್ಕೆ ಆಡುಗೋಡಿಯಲ್ಲಿರುವ ಸಿಸಿಬಿಯ ತಾಂತ್ರಿಕ ವಿಭಾಗದ ಕೊಠಡಿಗೆ ಬಂದಿದ್ದ ಯುವತಿ, ಅಧಿಕಾರಿಗಳ ವಿಚಾರಣೆಗೆ ಹಾಜರಾದರು. ತನಿಖಾ ತಂಡ, ಮೊದಲೇ ಸಿದ್ಧಪಡಿಸಿಕೊಂಡಿದ್ದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು. ರಾತ್ರಿಯವರೆಗೂ ವಿಚಾರಣೆ ನಡೆಯಿತು.

2019ರ ಡಿಸೆಂಬರ್‌ನಿಂದ ಪರಿಚಯ:‘ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿಅತ್ಯಾಚಾರ ಎಸಗಿದ್ದ ರಮೇಶ ಜಾರಕಿಹೊಳಿ, ಜೀವ ಬೆದರಿಕೆ ಹಾಕಿದ್ದರು. ಅವರಿಂದಾದ ಅನ್ಯಾಯದ ವಿರುದ್ಧ ಹೋರಾಡುವುದು ಕಷ್ಟವೆಂಬುದು ಗೊತ್ತಾಯಿತು. ಸ್ನೇಹಿತನ ಮೂಲಕ ಸುದ್ದಿವಾಹಿನಿಯ ಹಲವರ ಪರಿಚಯವಾಗಿತ್ತು. ನನಗಾದ ಅನ್ಯಾಯವನ್ನು ಅವರ ಎದುರು ಹೇಳಿಕೊಂಡಿದ್ದೆ’ ಎಂದೂ ಯುವತಿ ಹೇಳಿರುವುದಾಗಿ ಗೊತ್ತಾಗಿದೆ.

‘ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ, ಕಿರುಚಿತ್ರ ನಿರ್ಮಾಣದತ್ತ ಆಸಕ್ತಿ ತೋರಿದ್ದರು. ಉತ್ತರ ಕರ್ನಾಟಕದ ಜಲಾಶಯ ಹಾಗೂ ನದಿಗಳನ್ನು ಚಿತ್ರೀಕರಿಸಲು ಸ್ನೇಹಿತರ ಜೊತೆ ಸೇರಿ ಯೋಜನೆ ರೂಪಿಸಿದ್ದರು. 2019ರ ಡಿಸೆಂಬರ್‌ನಿಂದಲೇ ಯುವತಿಗೆ ರಮೇಶ ಜಾರಕಿಹೊಳಿ ಪರಿಚಯವಿತ್ತು. ಜನವರಿಯಲ್ಲಿ ರಮೇಶ, ಯುವತಿಗೆ ಮೊಬೈಲ್ ಉಡುಗೊರೆ ನೀಡಿದ್ದರು. ಅದಾದ ನಂತರ, ಚಿನ್ನಾಭರಣ ಸೇರಿದಂತೆ ಹಲವು ಉಡುಗೊರೆಗಳನ್ನೂ ಕೊಟ್ಟಿದ್ದರು. ಅವುಗಳನ್ನೆಲ್ಲ ಯುವತಿ ನಮಗೆ ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ವಕೀಲರ ಮೂಲಕ ಪತ್ರ : ವಿಚಾರಣೆಗೆ ಗೈರಾದ ರಮೇಶ ತಮ್ಮ ವಕೀಲ ಶ್ಯಾಮಸುಂದರ್ ಮೂಲಕ ಎಸ್‌ಐಟಿ ಅಧಿಕಾರಿಗಳಿಗೆ ಪತ್ರ ತಲುಪಿಸಿದ್ದಾರೆ.'ನನಗೆ ಅನಾರೋಗ್ಯವಿದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ವಿಚಾರಣೆಗೆ ಬರಲು ಆಗುತ್ತಿಲ್ಲ' ಎಂದು ಪತ್ರದಲ್ಲಿ ರಮೇಶ ಉಲ್ಲೇಖಿಸಿರುವುದಾಗಿ ಗೊತ್ತಾಗಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಶ್ಯಾಮಸುಂದರ್, 'ರಮೇಶ ಅವರಿಗೆ ಬಂಧನದ ಭೀತಿಯಿಲ್ಲ. ಗೋಕಾಕದಲ್ಲಿರುವ ಅವರು ಅನಾರೋಗ್ಯದ ಕಾರಣ ಹೊರಗೆ ಕಾಣಿಸುತ್ತಿಲ್ಲ’ ಎಂದರು.

ವಿಚಾರಣೆ ಬಗ್ಗೆ ಮಾಹಿತಿ ನೀಡಿರುವ ಎಸ್‌ಐಟಿ ಮೂಲಗಳು, ‘ ಕಾಲಾವಕಾಶ ಕೋರಿದ ಪತ್ರವನ್ನು
ಪರಿಶೀಲಿಸುತ್ತಿದ್ದೇವೆ. ಸೋಮವಾರ (ಏಪ್ರಿಲ್ 5) ಬೆಳಿಗ್ಗೆ ವಿಚಾರಣೆಗೆ ಕರೆಯಲು ಚಿಂತನೆ ನಡೆಸಿದ್ದೇವೆ’ ಎಂದೂ ಹೇಳಿದರು.

‘₹ 9 ಲಕ್ಷದ ಮಾಹಿತಿ ಇಲ್ಲ’:

ರಮೇಶ ಜಾರಕಿಹೊಳಿ ದೂರು ಆಧರಿಸಿ ಸದಾಶಿನಗರ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ತನಿಖೆ ಕೈಗೊಂಡಿದ್ದ ಎಸ್‌ಐಟಿ ಅಧಿಕಾರಿಗಳು, ಯುವತಿ ವಾಸವಿದ್ದ ಆರ್‌.ಟಿ.ನಗರದಲ್ಲಿರುವ ಕೊಠಡಿಯಲ್ಲಿ ತಪಾಸಣೆ ನಡೆಸಿತ್ತು. ಕೊಠಡಿಯ ಬೆಡ್‌ ಕೆಳಗೆ ₹ 9 ಲಕ್ಷ ಪತ್ತೆಯಾಗಿತ್ತು.

ಆ ಬಗ್ಗೆ ತನಿಖಾಧಿಕಾರಿ ಪ್ರಶ್ನಿಸಿದ್ದು, ‘ಆ ಹಣ ಎಲ್ಲಿಂದ ಬಂತು ಎಂಬ ಮಾಹಿತಿ ನನಗಿಲ್ಲ. ರಮೇಶ ಜಾರಕಿಹೊಳಿ ಹಾಗೂ ಅವರ ಕಡೆಯವರಿಂದ ಜೀವ ಭಯವಿತ್ತು. ಹೀಗಾಗಿ, ಕೊಠಡಿ ಬಿಟ್ಟು ಅಜ್ಞಾತ ಸ್ಥಳಕ್ಕೆ ಹೋಗಿದ್ದೆ’ ಎಂದು ಯುವತಿ ಉತ್ತರಿಸಿರುವುದಾಗಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.