ADVERTISEMENT

ಸಿ.ಡಿ ಪ್ರಕರಣ: ಇಂದು ವಿಚಾರಣೆಗೆ ಹಾಜರಾಗುವಂತೆ ರಮೇಶ ಜಾರಕಿಹೊಳಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 2:35 IST
Last Updated 2 ಏಪ್ರಿಲ್ 2021, 2:35 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಡಿದ್ದ ದೂರು ಆಧರಿಸಿ ದಾಖಲಾಗಿರುವ ಎಫ್‌ಐಆರ್‌ ವಿಚಾರಣೆಗೆ ಇತ್ತೀಚೆಗಷ್ಟೇ ಹಾಜರಾಗಿದ್ದ ರಮೇಶ ಜಾರಕಿಹೊಳಿ ಅವರಿಗೆ ಇದೀಗಮತ್ತೊಂದು ನೋಟಿಸ್ ನೀಡಲಾಗಿದೆ.

‘ಪ್ರಕರಣದಲ್ಲಿ ನಿಮ್ಮಿಂದ ಹಲವು ಅಗತ್ಯ ಮಾಹಿತಿ ಬೇಕಿದೆ. ಹೀಗಾಗಿ, ಶುಕ್ರವಾರ (ಏಪ್ರಿಲ್ 2) ಬೆಳಿಗ್ಗೆ 10 ಗಂಟೆಗೆ ವಿಚಾರಣೆಗಾಗಿ ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗದ ವಿಶೇಷ ಕೊಠಡಿಗೆ ಹಾಜರಾಗಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ನೋಟಿಸ್‌ನಲ್ಲಿ ತನಿಖಾಧಿಕಾರಿ ಎಚ್ಚರಿಸಿದ್ದಾರೆ.

ಬಹಿರಂಗವಾಗಿ ಕಾಣಿಸಿಕೊಳ್ಳದ ರಮೇಶ’: ಸಂತ್ರಸ್ತೆ ನ್ಯಾಯಾಲಯಕ್ಕೆ ಹೇಳಿಕೆ ನೀಡಿದಾಗಿನಿಂದಲೂ ರಮೇಶ ಜಾರಕಿಹೊಳಿ ಬಹಿರಂಗವಾಗಿ ಎಲ್ಲಿಯೂ ಕಾಣಿಸುತ್ತಿಲ್ಲ. ಮಾರ್ಚ್ 30ರಂದು ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ಆ ನಂತರ ಎಲ್ಲಿದ್ದಾರೆ ಎಂಬ ಮಾಹಿತಿಯೂ ಯಾರಿಗೂ ಸಿಗುತ್ತಿಲ್ಲ. ಅವರ ಬಗ್ಗೆ ಎಸ್‌ಐಟಿ ತಂಡವೂ ಮಾಹಿತಿ ಕಲೆಹಾಕುತ್ತಿದೆ.

ADVERTISEMENT

‘ಶುಕ್ರವಾರ ಬೆಳಿಗ್ಗೆ ರಮೇಶ ವಿಚಾರಣೆಗೆ ಬರಬಹುದೆಂದು ಕಾಯುತ್ತಿದ್ದೇವೆ. ಬಂದರೆ, ವಿಚಾರಣೆ ನಡೆಸಲಾಗುವುದು. ಇಲ್ಲದಿದ್ದರೆ, ಮುಂದಿನ ಕಾನೂನು ಕ್ರಮ’ ಎಂದೂ ಎಸ್‌ಐಟಿ ಮೂಲಗಳು ಹೇಳಿವೆ.

ಈ ಮಧ್ಯೆ, ಅತ್ಯಾಚಾರ ನಡೆದ ಸ್ಥಳ ಎನ್ನಲಾದ ಮಲ್ಲೇಶ್ವರದಲ್ಲಿರುವ ಮಂತ್ರಿ ಗ್ರೀನ್ಸ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲೂ ನಿನ್ನೆ ಮಹಜರು ಪ್ರಕ್ರಿಯೆ ನಡೆದಿದೆ. .ರಮೇಶ ಜಾರಕಿಹೊಳಿ ಜೊತೆಗೆ ಕಳೆದ ಪ್ರತಿಯೊಂದು ಕ್ಷಣಗಳನ್ನೂ ವಿವರಿಸಿದರು. ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಸಂದರ್ಶಕರ ಪಟ್ಟಿ ಪುಸ್ತಕ, ಕೊಠಡಿಯಲ್ಲಿದ್ದ ಬಟ್ಟೆಗಳು, ಬೆಡ್‌ಶಿಟ್‌ಗಳು, ಸ್ಥಳದಲ್ಲಿ ಸಿಕ್ಕ ಕೆಲ ಕೂದಲುಗಳನ್ನೂ ತನಿಖಾ ತಂಡ ಸುಪರ್ದಿಗೆ ಪಡೆದಿರುವುದಾಗಿ ಗೊತ್ತಾಗಿದೆ.

ಸಂತ್ರಸ್ತೆ ವಾಸವಿದ್ದ ಆರ್‌.ಟಿ.ನಗರದಲ್ಲಿರುವ ಕೊಠಡಿಗೆ ಹೋಗಿದ್ದ ತನಿಖಾ ತಂಡ, ಸಂತ್ರಸ್ತೆಯಿಂದಲೇ ವಿಸ್ತೃತ ಮಾಹಿತಿ ಪಡೆಯಿತು. ಕೊಠಡಿಯಲ್ಲಿ ಯಾರೆಲ್ಲ ಇದ್ದರು ? ಬೇರೆ ಯಾರೆಲ್ಲ ಬಂದು ಹೋಗಿದ್ದರು ? ಅವರು ಎಲ್ಲಿ ಕುಳಿತುಕೊಂಡಿದ್ದರು? ಕೊಠಡಿ ಮಾಲೀಕರ ಜೊತೆಗಿನ ಒಡನಾಟ ? ಅಕ್ಕ–ಪಕ್ಕದ ಹೋಟೆಲ್ ಹಾಗೂ ಅಂಗಡಿಗಳ ಬಳಿ ಭೇಟಿಯಾದ ವ್ಯಕ್ತಿಗಳು ? ಹೀಗೆ ಹಲವು ಪ್ರಶ್ನೆಗಳನ್ನು ಆಧರಿಸಿ ಮಹಜರು ನಡೆಸಲಾಯಿತು. ಎಲ್ಲ ಪ್ರಕ್ರಿಯೆಯನ್ನೂ ಫೋಟೊ ಹಾಗೂ ವಿಡಿಯೊ ಮೂಲಕ ದಾಖಲಿಸಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.