ADVERTISEMENT

ಕೇಂದ್ರ ಸರ್ಕಾರ ಮೋಸದಾಟ ನಿಲ್ಲಿಸಲಿ: ಸಿದಗೌಡ ಮೋದಗಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 16:35 IST
Last Updated 25 ಡಿಸೆಂಬರ್ 2019, 16:35 IST
ಸಿದಗೌಡ ಮೋದಗಿ
ಸಿದಗೌಡ ಮೋದಗಿ   

ಬೆಳಗಾವಿ: ‘ಕೇಂದ್ರ ಸರ್ಕಾರವು ಮಹದಾಯಿ, ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ರಾಜ್ಯದೊಂದಿಗೆ ಆಡುತ್ತಿರುವ ಮೋಸದಾಟ ನಿಲ್ಲಿಸಬೇಕು’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಎಚ್ಚರಿಕೆ ನೀಡಿದ್ದಾರೆ.

‘ಮಹದಾಯಿ ಕುರಿತಂತೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್‌ ಅವರು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರವು ಹಾಸ್ಯಾಸ್ಪದ ಮತ್ತು ಗೊಂದಲಮಯವಾಗಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಪರಿಸರ ಇಲಾಖೆಯ ಅನುಮತಿ ಇಲ್ಲ ಒಂದೆಡೆ ಹೇಳಿದರೇ, ಮತ್ತೊಂದೆಡೆ ನಾಯಮಂಡಳಿಯ ತೀರ್ಪಿನ ಅಧಿಸೂಚನೆ ಹೊರಡಿಸಿದ ನಂತರ ಅಗತ್ಯ ಅನುಮತಿ ಪಡೆದು ಕಾಮಗಾರಿ ಆರಂಭಿಸಬಹುದು ಎಂದು ಹೇಳುವ ಮೂಲಕ ಸಚಿವರು ಬಾಲಿಶತನ ಮೆರೆದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪರಿಸರ ಸಚಿವಾಲಯವು ಈ ಹಿಂದೆ ನೀಡಿರುವ ಅನುಮತಿಗೆ ತಡೆ ನೀಡಿಲ್ಲ. ನ್ಯಾಯಮಂಡಳಿ ಅಧಿಸೂಚನೆ ಬಳಿಕ ಪರಿಸರ ಇಲಾಖೆಯೊಂದಿಗೆ ವನ್ಯಜೀವಿ ವಿಭಾಗದ ಅನುಮತಿ ಪಡೆಯಬೇಕೆಂದು ತಿಳಿಸುವ ಮೂಲಕ ಗೊಂದಲ ಮೂಡಿಸಿದ್ದಾರೆ. ನ್ಯಾಯಮಂಡಳಿಯಿಂದ ಅಧಿಸೂಚನೆ ಬಳಿಕ ಪರಿಸರ ಇಲಾಖೆಯ ಅನುಮತಿ ಅಗತ್ಯ ಇಲ್ಲ ಎಂದಿದ್ದವರು ಮತ್ತೆ ಅನುಮತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ಅಧಿಸೂಚನೆ ಹೊರಡಿಸಬೇಕಾಗಿರುವುದು, ಕಾಮಗಾರಿಗೆ ಅಗತ್ಯ ಅನುಮತಿ ನೀಡಬೇಕಾಗಿರುವುದು ಕೇಂದ್ರ ಸರ್ಕಾರವೇ. ಆ ಜವಾಬ್ದಾರಿ ನಿರ್ವಹಿಸದೇ ಬಾಲಿಶ ಪತ್ರಗಳನ್ನು ಬರೆದು ಸಮಯ ವ್ಯರ್ಥ ಮಾಡುತ್ತಿರುವುದು ಖಂಡನೀಯವಾಗಿದೆ. ಕೇಂದ್ರದ ಈ ತಂತ್ರದಾಟಗಳು ರಾಜ್ಯದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಲಿವೆ’ ಎಂದು ಎಚ್ಚರಿಸಿದ್ದಾರೆ.

‘ರಾಜ್ಯ ಸರ್ಕಾರವು ಕೇಂದ್ರ ಹೇಳಿದ್ದಕ್ಕೆಲ್ಲಾ ತಲೆಯಾಡಿಸದೇ, ಇಲ್ಲಿನ ಜನರ ಹಿತ ಕಾಪಾಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.