ನವದೆಹಲಿ: ರಾಜ್ಯಗಳ ಕೋರಿಕೆಯ ಮೇರೆಗೆ ಕೃಷ್ಣಾ ನ್ಯಾಯಮಂಡಳಿಯ ತೀರ್ಪು ಭವಿಷ್ಯದಲ್ಲಿ ಪರಿಷ್ಕರಣೆಗೆ ಒಳಗಾಗಬಹುದು ಎಂದು ಕೇಂದ್ರ ಸರ್ಕಾರ ಸುಳಿವು ನೀಡಿದೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನೆಗೆ ಗುರುವಾರ ಲಿಖಿತ ಉತ್ತರ ನೀಡಿದ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ, ʼಹಿಂದಿನ ವಿವಿಧ ನ್ಯಾಯಮಂಡಳಿಗಳು ನಿರ್ದಿಷ್ಟ ಸಮಯ ಮುಗಿದ ನಂತರ ನೀರಿನ ಹಂಚಿಕೆಯ ನಿಯಮಿತ ಪರಿಷ್ಕರಣೆ ಆಗಬೇಕು ಎಂದು ಪ್ರತಿಪಾದಿಸಿದ್ದವು. ಕೃಷ್ಣಾ ನ್ಯಾಯಮಂಡಳಿಯ ವಿಷಯದಲ್ಲೂ ಇದೇ ರೀತಿ ಆಗಬಹುದುʼ ಎಂದಿದ್ದಾರೆ.
ʼಕೃಷ್ಣಾ ನ್ಯಾಯಮಂಡಳಿಯು 2010ರಲ್ಲಿ ವರದಿ ಸಲ್ಲಿಸಿತ್ತು. ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಸ್ಪಷ್ಟೀಕರಣ ಕೇಳಿದ್ದರಿಂದ ನ್ಯಾಯಮಂಡಳಿಯು 1956 ರ ಜಲ ಕಾಯ್ದೆಯ ಸೆಕ್ಷನ್ 5(3) ರ ಅಡಿಯಲ್ಲಿ ಮುಂದಿನ ವರದಿಯನ್ನು 2013ರಲ್ಲಿ ನೀಡಿತ್ತು. ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರವು 2010ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ನ್ಯಾಯಮಂಡಳಿಯ ವರದಿಯನ್ನು ಮುಂದಿನ ಆದೇಶದ ವರೆಗೆ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಬಾರದು ಎಂದು 2011ರಲ್ಲಿ ನಿರ್ದೇಶನ ನೀಡಿತ್ತು. ಹೀಗಾಗಿ, ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.