ADVERTISEMENT

‘ಮಾಂಸಾಹಾರಿ ಬೋಧನೆ ಸಿಬ್ಬಂದಿ’– ಇದು ಕರ್ನಾಟಕ ಕೇಂದ್ರೀಯ ವಿವಿ ವಿಶೇಷ!

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 14:14 IST
Last Updated 1 ಅಕ್ಟೋಬರ್ 2018, 14:14 IST
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವೆಬ್‌ಸೈಟ್‌
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವೆಬ್‌ಸೈಟ್‌   

ಬೆಂಗಳೂರು:ಜಗತ್ತಿನ ಎಲ್ಲೂ ಕೇಳಿ ಕಂಡರಿಯರಿಯದ ವಿಶಿಷ್ಟ, ಅಪರೂಪ ಹಾಗೂ ವಿಭಿನ್ನವಾದ ಹುದ್ದೆಯೊಂದು ಇಲ್ಲಿದೆ. ಇಂಥದೊಂದು ಹುದ್ದೆ ಸೃಷ್ಟಿಯಾಗಿರುವುದು ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ನಡೆಸುವ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ. ಆ ಬೋಧಕರೇ ’ಮಾಂಸಾಹಾರಿ ಬೋಧನೆ ಸಿಬ್ಬಂದಿ’!!

– ಈ ಮಾಂಸಾಹಾರಿ ಸಿಬ್ಬಂದಿ ಯಾವ ವಿದ್ಯಾರ್ಥಿಗಳಿಗೆ ಹಾಗೂ ಯಾವ ರೀತಿಯ ಬೋಧನೆ ನಡೆಸುತ್ತಾರೆ ಎಂಬಂಥ ಪ್ರಶ್ನೆಗಳಿಗೆ 'ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ'ವೇ ಉತ್ತರಿಸಬೇಕಿದೆ. ಏಕೆಂದರೆ, ಇಂಥದ್ದೊಂದು ಹುದ್ದೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಕೊಂಡಿರುವುದು ಇದೇ ವಿಶ್ವವಿದ್ಯಾಲಯ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮುಖಪುಟದಲ್ಲಿರುವ ’ಆಡಳಿತ’ ವಿಭಾಗ ಪ್ರವೇಶಿ, ಅಲ್ಲಿನ ಉಪವಿಭಾಗಗಳನನ್ನು ಗಮನಿಸುತ್ತಾ ಹೋದರೆ; ಮಾಜಿ ಉಪ ಕುಲಪತಿಗಳ ಮೇಲೆ ಕಾಣುವವರೇ ’ಮಾಂಸಾಹಾರಿ ಬೋಧನೆ ಸಿಬ್ಬಂದಿ’. ಆ ಆಯ್ಕೆಯನ್ನು ಕ್ಲಿಕ್ಕಿಸಿದರೆ, ಈ ವರ್ಗದಲ್ಲಿ 46 ಸಿಬ್ಬಂದಿಗಳ ಹೆಸರುಗಳು ಇರುವುದನ್ನು ಕಾಣಬಹುದು. ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹೇಳುವಂತೆ ಇವರೆಲ್ಲರೂ ಮಾಂಸಾಹಾರಿ ಬೋಧನೆ ಸಿಬ್ಬಂದಿಗಳೇ.

ADVERTISEMENT

ಇಂಗ್ಲಿಷ್‌ ಪದಗಳು ಹಾಗೂ ವಿವರಗಳನ್ನು ಒಳಗೊಂಡು ರೂಪಿಸಲಾಗಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವೆಬ್‌ಸೈಟ್‌ನ್ನು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಕಾಣಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ವಿಶ್ವವಿದ್ಯಾಲಯ ಹುಡುಕಿಕೊಂಡಿರುವ ಮಾರ್ಗ ’ಗೂಗಲ್ ಅನುವಾದ’ ವ್ಯವಸ್ಥೆ.

ಇಂಗ್ಲಿಷ್‌ ಪದಗಳನ್ನು ತನ್ನ ಸಂಗ್ರಹದಲ್ಲಿ ಇರುವಂತೆಯೇ ಅನುವಾದಿಸಿ ಗೂಗಲ್‌ ನೀಡುತ್ತದೆ. ನಾನ್‌ ಟೀಚಿಂಗ್‌ ಸ್ಟಾಫ್‌ (Non Teaching Staff) ಇಲ್ಲಿ ’ಮಾಂಸಾಹಾರಿ ಬೋಧನೆ ಸಿಬ್ಬಂದಿ’ಯಾಗಿ ಕಾಣುತ್ತಿದೆ.

ಕಂಟ್ರೋಲರ್‌ ಆಫ್‌ ಎಕ್ಸಾಮಿನೇಷನ್‌ ಹುದ್ದೆಗೆ ಇಲ್ಲಿ ’ಪರೀಕ್ಷೆ ನಿಯಂತ್ರಿಸುತ್ತಾನೆ’ ಎಂದು ಹೆಸರು. ಸ್ಟಾಸ್ಟ್ಯೂಟರಿ ಬಾಡೀಸ್‌ ಅಂದ್ರೆ ’ಶಾಸನಬ್ಧ ಬಾಡೀಸ್‌’; ದೇಶದ ಗೌರವಾನ್ವಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ’ಗೌರವಾನ್ವಿತ ಭಾರತದ ರಾಷ್ಟ್ರಪತಿಗಳು’ ಎಂದು ಕಾಣುತ್ತದೆ. ಇನ್ನು ವಿಶ್ವವಿದ್ಯಾಲಯದ ಕುರಿತಾಗಿ ಪ್ರಕಟಿಸಲಾಗಿರುವ ಪ್ರೊ.ಎಂ.ಎಚ್‌.ಮಹೇಶ್ವರಯ್ಯ ಅವರ ವಿವರವಾದ ಪತ್ರವಂತೂ ಓದಲೂ ವಿಭಿನ್ನ, ವಿಶೇಷವೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.