ADVERTISEMENT

ಸಿಬಿಐ ತನಿಖೆಗೆ ಪ್ರಧಾನಿ ಹೇಳಿಲ್ಲ: ದೇವೇಗೌಡ

‘ನೆರೆ ಹಾವಳಿ ಸಂದರ್ಭದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ಅನಗತ್ಯ’ l ರಾಜಕೀಯ ಕೆಸರೆರಚಾಟ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:00 IST
Last Updated 19 ಆಗಸ್ಟ್ 2019, 20:00 IST
ದೇವೇಗೌಡ
ದೇವೇಗೌಡ   

ಬೆಂಗಳೂರು: ‘ಫೋನ್‌ ಕದ್ದಾಲಿಕೆ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಇತರ ನಾಯಕರು ಯಡಿಯೂರಪ್ಪ ಅವರನ್ನು ಕರೆದು ಸಿಬಿಐ ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.
ದೇವೇಗೌಡ ಹೇಳಿದರು.

‘ಕೇಂದ್ರದ ನಾಯಕರಿಗೆ ಅವರದೇ ಆದ ಕೆಲಸಗಳಿವೆ. ಸಾಕಷ್ಟು ಸಮಸ್ಯೆ ಇರುವಾಗ ಯಡಿಯೂರಪ್ಪ ಅವರನ್ನು ಕರೆದು ತನಿಖೆ ನಡೆಸಿ ಅಂತ ಹೇಳುತ್ತಾರಾ? ಇದೇನಿದ್ದರೂ ಇಲ್ಲೇ ಸಿದ್ಧವಾದ ತಂತ್ರ. ಇಂತಹ ತನಿಖೆಗೆ ಹೆದರುವ ಪ್ರಶ್ನೆ ಇಲ್ಲವಾದರೂ, ನೆರೆ ಪರಿಹಾರದ ಕಡೆಗೆ ಎಲ್ಲರೂ ಗಮನ ಹರಿಸಬೇಕಾಗಿದೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಧಾನಿ ಬಗ್ಗೆ ನಾನು ಲಘುವಾಗಿ ಮಾತನಾಡಿಲ್ಲ. ನಾನೂ ಪ್ರಧಾನಿಯಾಗಿದ್ದೆ. ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರದ ಮಿತಿಯೂ ನನಗೆ ಗೊತ್ತಿದೆ.ನಾವು ಕೇಳಿದಷ್ಟು ಪರಿಹಾರವನ್ನು ಯಾವ ಸರ್ಕಾರವೂ ಕೊಟ್ಟಿಲ್ಲ’ ಎಂದರು.

ADVERTISEMENT

ಕೆದಕುವ ಅಗತ್ಯ ಇರಲಿಲ್ಲ: ‘ನೆರೆ ಹಾವಳಿಯಿಂದ ತತ್ತರಿಸಿರುವ ರಾಜ್ಯದಲ್ಲಿ ಪುನರ್ವಸತಿ ಕಾರ್ಯಗಳಿಗೆ ಗಮನ ಹರಿಸಿ ಜನರ ಕಷ್ಟ ಪರಿಹರಿಸಬೇಕಿದ್ದು, ಫೋನ್‌ ಕದ್ದಾಲಿಕೆಯಂತಹ ವಿಷಯಗಳನ್ನು ಕೆದಕುವ ಅಗತ್ಯವೇ ಇಲ್ಲ‌‘ ಎಂದು ಅವರು ಪ್ರತಿಪಾದಿಸಿದರು.

‘ಪಕ್ಷಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸಹ ಒಂದು ಪ್ರಕರಣದಲ್ಲಿ ಟೆಲಿಫೋನ್ ಕದ್ದಾಲಿಕೆ ತಪ್ಪಲ್ಲ ಎಂದು ಹೇಳಿದೆ.ಯಾರೇ ಮುಖ್ಯಮಂತ್ರಿ,ಪ್ರಧಾನಿಯಾಗಿದ್ದರೂ ಗುಪ್ತಚರ ಇಲಾಖೆ ಮಾಹಿತಿ ನೀಡುತ್ತದೆ. ಅದಕ್ಕೆ ಆ ಹೊಣೆಗಾರಿಕೆ ಇದೆ. ಈಗ ಕೆಸರೆರಚಾಟ ಅಗತ್ಯವೇ ಇಲ್ಲ. ಇದನ್ನು ನಿಲ್ಲಿಸಿ ನೆರೆ ಕಡೆ ಗಮನ ಕೊಡಿ ಎಂದು ವಿನಂತಿ ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ನಾನು ಯಾರ ಪರವೂ ಇಲ್ಲ, ವಿರುದ್ಧವೂಇಲ್ಲ. ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿಸಂಪುಟ ಸಭೆ ಮಾಡಿದರು. ಆದರೆ ಒಬ್ಬ ವ್ಯಕ್ತಿಯಿಂದ ಸಚಿವ ಸಂಪುಟ ಆಗುವುದಿಲ್ಲ.ನಾನು ಯಾವುದೇ ಕ್ರಿಯಾ ಲೋಪ ಎತ್ತುತ್ತಿಲ್ಲ. ಹಣಕಾಸು ಮಸೂದೆಯನ್ನು ಅಂಗೀಕರಿಸುವುದಕ್ಕೂ ಸಭಾಧ್ಯಕ್ಷರು ಅವಕಾಶ ಕೊಟ್ಟಿದ್ದಾರೆ, ಅದಕ್ಕೆ ಎಲ್ಲರೂ ಸಹಕಾರ ನೀಡಿದರು. ಪುಂಖಾನುಪುಂಖವಾಗಿಒಬ್ಬೊಬ್ಬರಿಗೇ ಒಂದೊಂದು ವಿಮಾನ ಮಾಡಿ ಕರೆದುಕೊಂಡು ಹೋದಾಗಲೂ ನಾನು ಮಾತನಾಡಿಲ್ಲ’ ಎಂದು ಅವರು ಮಾರ್ಮಿಕವಾಗಿ ನುಡಿದರು.

ಈ ಮೊದಲು ಸಹ ಹಲವು ಕದ್ದಾಲಿಕೆ ಪ್ರಕರಣಗಳು ನಡೆದಿದ್ದನ್ನು ವಿವರಿಸಿದ ಅವರು, ಸಿಬಿಐ ತನಿಖೆಗೆ ಒಳಪಡಿಸುವ ಮೂಲಕ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿದರು.

‘ದ್ವೇಷದ ರಾಜಕಾರಣ ಮಾಡಿಲ್ಲ’

‘ಕುಟುಕು ಕಾರ್ಯಾಚರಣೆ ನಡೆಸಿದ ವೇಳೆ ತಮ್ಮದೇ ಧ್ವನಿ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದರು. ಆಗ ವಿಶೇಷ ತನಿಖಾ ದಳದಿಂದ ತನಿಖೆಗೆ ಒಳಪಡಿಸಬಹುದಿತ್ತು. ಆದರೆ ಕುಮಾರಸ್ವಾಮಿ ಹಾಗೆ ಮಾಡಲಿಲ್ಲ. ದ್ವೇಷದ ರಾಜಕಾರಣಕ್ಕೂ ಕೈಹಾಕಲಿಲ್ಲ’ ಎಂದು ದೇವೇಗೌಡರು ಹೇಳಿದರು.

ಸಿಬಿಐನಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ: ಸಿದ್ದರಾಮಯ್ಯ

ಹುಬ್ಬಳ್ಳಿ:‘ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ), ಆರ್‌ಬಿಐ ಸೇರಿದಂತೆ ಪ್ರಮುಖ ಸಂಸ್ಥೆಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ದುರ್ಬಳಕೆ ಮಾಡಿಕೊಂಡಿದೆ. ಹೀಗಾಗಿ ಸಿಬಿಐನಿಂದ ಫೋನ್‌ ಕದ್ದಾಲಿಕೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಇಲ್ಲಿ ಟೀಕಿಸಿದರು.

‘ಅಮಿತ್ ಶಾ ನಿರ್ದೇಶನದ ಮೇರೆಗೆ ಯಡಿಯೂರಪ್ಪ ರಾಜಕೀಯ ದ್ವೇಷ ಸಾಧಿಸುವುದಕ್ಕಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ನನ್ನ ಸಲಹೆ ಮೇರೆಗೆ ಸಿಬಿಐಗೆ ನೀಡಲಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ನೂರಕ್ಕೆ ನೂರರಷ್ಟು ಸುಳ್ಳು’ ಎಂದು ಹೇಳಿದರು.

‘ಸಿಬಿಐ ಬಗ್ಗೆ ಬಿಜೆಪಿಯವರಿಗೆ ಈ ಮೊದಲು ವಾಕರಿಕೆ ಇತ್ತು. ಸಿಬಿಐ ಎಂದರೆ ಚೋರ್‌ ಬಚಾವ್‌ ಸಂಸ್ಥೆ ಎಂದು ಕರೆಯುತ್ತಿದ್ದರು. ಆದರೆ, ಈಗ ಸಿಬಿಐ ಬಗ್ಗೆ ವ್ಯಾಮೋಹ ಬಂದಿದೆ’ ಎಂದು ವ್ಯಂಗ್ಯವಾಡಿದರು.

ನಯಾಪೈಸೆ ಕೊಟ್ಟಿಲ್ಲ:‘ರಾಜ್ಯದಲ್ಲಿ ಭೀಕರ ಪ್ರವಾಹದಿಂದಾಗಿ ₹1 ಲಕ್ಷ ಕೋಟಿ ನಷ್ಟವಾಗಿದೆ. ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದು ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಮುಖ್ಯಮಂತ್ರಿ ಅವರು ಪ್ರಧಾನಿಯನ್ನು ಭೇಟಿ ಮಾಡಿದರೂ ಇದುವರೆಗೆ ಕೇಂದ್ರ ಸರ್ಕಾರ ನಯಾಪೈಸೆ ಪರಿಹಾರ ನೀಡಿಲ್ಲ’ ಎಂದು ಖಾರವಾಗಿ ಪ್ರಶ್ನಿಸಿದರು.

ಆರೋಪ ಸಾಬೀತಾದರೆ ರಾಜಕೀಯ ಸನ್ಯಾಸ: ಎಚ್‌ಡಿಕೆ

ಕಳಸ: ‘ನನ್ನ ವಿರುದ್ಧ ದೂರವಾಣಿ ಕದ್ದಾಲಿಕೆ ಆರೋಪ ಸಾಬೀತಾದರೆ ರಾಜಕೀಯ ಸನ್ಯಾಸ ಪಡೆಯುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಕಳಸ ಮತ್ತು ಮೂಡಿಗೆರೆ ತಾಲ್ಲೂಕುಗಳ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಸೋಮವಾರ ಪ್ರವಾಸ ಮಾಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ಯಾವುದೇ ತನಿಖೆಯನ್ನು, ಯಾರಿಂದ ಬೇಕಾದರೂ ಮಾಡಿಸಿಕೊಳ್ಳಲಿ’ ಎಂದು ಅವರು ಸವಾಲು ಹಾಕಿದರು. ‘ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿರುವ ಎಚ್. ವಿಶ್ವನಾಥ್ ನನ್ನ ಮೇಲೆ ವೃಥಾ ಆರೋಪ ಮಾಡಿದ್ದಾರೆ. ಅವರಿಗೆ ಇದು ಶೋಭೆ ತರುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಮ್ಮೆ ಜೈಲಿಗೆ ಹೋಗ್ತೀರಿ: ‘ಬಿ.ಎಸ್‌. ಯಡಿಯೂರಪ್ಪ ಅವರು ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದಿದ್ದರೆ ಮತ್ತೊಮ್ಮೆ ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

‘ಯಡಿಯೂರಪ್ಪ ಅವರ ಪುತ್ರನಿಗೆ ಹೇಳಬಯಸುವುದೇನೆಂದರೆ ಟ್ವೀಟ್‌ ಮಾಡುವುದು ಸುಲಭ, ನಿಮ್ಮ ಕ್ರಿಯೆಯಲ್ಲಿ ಯಾವ ರೀತಿ ನಡೆದುಕೊಳ್ಳುತ್ತೀರಿ, ಅದರ ಕಡೆಗೆ ಗಮನ ಕೊಡಿ. ನಾನು ಸಾವಿರ ಟ್ವೀಟ್‌ ಮಾಡಬಲ್ಲೆ’ ಎಂದು ಗುಡುಗಿದರು.

‘ಜೈಲಿಗೆ ಹೋಗಿ ಬಂದವರಿಗೆ ತಹಶೀಲ್ದಾರ್‌ ಆಗಿ ಯಲಹಂಕಕ್ಕೆ ವರ್ಗಾವಣೆ ಮಾಡಿದ್ದೀರಿ. ಬಿಡಿಎಗೆ ಕಮಿಷನರ್‌ ಹಾಕಿಕೊಂಡಿದ್ದೀರಲ್ಲ; ಎಷ್ಟು ಕೋಟಿಗೆ ವ್ಯಾಪಾರ ಮಾಡಿಕೊಂಡಿದ್ದೀರಿ? 14 ತಿಂಗಳು ಆಡಳಿತ ನಡೆಸಿದಾಗ ಅವರನ್ನೆಲ್ಲ ಎಲ್ಲೆಲ್ಲಿ ಇಟ್ಟಿದ್ದೆ ಎಂಬುದು ಹಿರಿಯ ಅಧಿಕಾರಿಗಳಿಗೆ ಗೊತ್ತಿದೆ. ಅವರ ಹಿನ್ನೆಲೆ ಏನು ಎಂಬುದೂ ತಿಳಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.