ADVERTISEMENT

ಸಮಗ್ರ ಪರಿಸರ ಯೋಜನೆ: ವಿಶೇಷ ಪೀಠ ಸ್ಥಾಪನೆಗೆ ‘ಸುಪ್ರೀಂ’ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 16:04 IST
Last Updated 18 ಮಾರ್ಚ್ 2022, 16:04 IST
ಹಾಲಪ್ಪ ಆಚಾರ್‌
ಹಾಲಪ್ಪ ಆಚಾರ್‌    

ಬೆಂಗಳೂರು: ‘ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳ ಸಮಗ್ರ ಪರಿಸರ ಯೋಜನೆ’ (ಸೆಪ್‌ಮಿಜ್‌) ಅನುಷ್ಠಾನಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗೆ ವಿಶೇಷ ಪೀಠ ರಚಿಸುವ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಕೈಗೊಂಡಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಜಿ. ಸೋಮಶೇಖರ ರೆಡ್ಡಿ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು, ‘2018ರಲ್ಲೇ ಸೆಪ್‌ಮಿಜ್‌ ಕ್ರಿಯಾ ಯೋಜನೆಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಮೂಲ ಅರ್ಜಿ, ರಾಜ್ಯ ಸರ್ಕಾರ ಇತರರು ಸಲ್ಲಿಸಿರುವ ಎಲ್ಲ ಮಧ್ಯಂತರ ಅರ್ಜಿಗಳ ವಿಚಾರಣೆಗೆ ವಿಶೇಷ ಪೀಠ ರಚಿಸುವುದಾಗಿ 2022ರ ಫೆಬ್ರುವರಿ 16ರಂದು ಸುಪ್ರೀಂಕೋರ್ಟ್‌ ತಿಳಿಸಿದೆ’ ಎಂದರು.

2018ರ ಅಕ್ಟೋಬರ್‌ 11ರಿಂದ 2022ರ ಫೆಬ್ರುವರಿ 16ರವರೆಗೆ ಸುಪ್ರೀಂಕೋರ್ಟ್‌ನಲ್ಲಿ 31 ಬಾರಿ ವಿಚಾರಣೆ ನಡೆದಿದೆ. ಆದರೆ, ಇನ್ನೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ ಎಂದು ಹೇಳಿದರು.

ADVERTISEMENT

ಸೆಪ್‌ಮಿಜ್‌ ಅಡಿಯಲ್ಲಿ ಒಟ್ಟು ₹ 24,996.71 ಕೋಟಿ ವೆಚ್ಚ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಗೆ ₹ 13,378.41 ಕೋಟಿ, ಚಿತ್ರದುರ್ಗ ಜಿಲ್ಲೆಗೆ ₹ 3,792.30 ಕೋಟಿ ಮತ್ತು ಚಿತ್ರದುರ್ಗ ಜಿಲ್ಲೆಗೆ ₹ 2,554.05 ಕೋಟಿ ವೆಚ್ಚ ಮಾಡುವುದು ಸೇರಿದೆ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಇಎಂಆರ್‌ಸಿ) ಮೂಲಕ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘ಸೆಪ್‌ಮಿಜ್‌ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿರುವ ಪ್ರಕರಣ ಇತ್ಯರ್ಥಕ್ಕೆ ಪ್ರಯತ್ನ ಮುಂದುವರಿದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಾನು ದೆಹಲಿಯಲ್ಲಿ ವಕೀಲರ ತಂಡದ ಜತೆ ಸಭೆ ನಡೆಸಿದ್ದೇವೆ. ಏಪ್ರಿಲ್‌ ಅಂತ್ಯದೊಳಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.