ಬೆಂಗಳೂರು: ‘ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ರ‍್ಯಾಂಕ್ ತಡೆಹಿಡಿದಿರುವ ಅಥವಾ ರ‍್ಯಾಂಕ್ ನೀಡದಿರುವ ಅಭ್ಯರ್ಥಿಗಳು ಆತಂಕಪಡುವ ಅಗತ್ಯ ಇಲ್ಲ. ಅಂಥವರು ಕೆಇಎ ಸೋಮವಾರ ಬಿಡುಗಡೆ ಮಾಡುವ ಪೋರ್ಟಲ್‌ನಲ್ಲಿ ತಮ್ಮ ಅಂಕ ದಾಖಲಿಸಿ ರ‍್ಯಾಂಕ್ ಪಡೆಯಬಹುದು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.
ಸಿಇಟಿ ಫಲಿತಾಂಶವನ್ನು ಕೆಇಎ ಶನಿವಾರ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಯುಸಿಯಲ್ಲಿ ನೀಡಿದ್ದ ವಿಶಿಷ್ಟ ಸಂಖ್ಯೆಯನ್ನು ಸಿಇಟಿಗೆ ಅರ್ಜಿ ಸಲ್ಲಿಸುವಾಗ ಕೆಲವರು ತಪ್ಪಾಗಿ ನಮೂದಿಸಿದ್ದಾರೆ. ಅಂಥವರ ರ‍್ಯಾಂಕ್ ಪ್ರಕಟಿಸಿಲ್ಲ. ಅಂತಹ ಅಭ್ಯರ್ಥಿಗಳಿಗೆ ಸರಿ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಸುಮಾರು 3 ಸಾವಿರ ವಿದ್ಯಾರ್ಥಿಗಳ ರ‍್ಯಾಂಕ್ ತಡೆಹಿಡಿಯಲಾಗಿದೆ’ ಎಂದರು.
‘ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶದ ನಂತರ ಮತ್ತು ಅದರ ಕೌನ್ಸೆಲಿಂಗ್ ವೇಳಾಪಟ್ಟಿ ನೋಡಿಕೊಂಡು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಒಟ್ಟಿಗೆ ಕೌನ್ಸೆಲಿಂಗ್ ನಡೆಸಲಾಗುವುದು’ ಎಂದು ವಿವರಿಸಿದರು.
‘ನೀಟ್ ಪರೀಕ್ಷೆ ತೆಗೆದುಕೊಂಡಿದ್ದರೂ ರಾಜ್ಯದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕಾದರೆ ಕೆಇಎಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ, ಕೆಲವರು ಈ ರೀತಿ ಅರ್ಜಿ ಸಲ್ಲಿಸಿಲ್ಲ ಎಂದು ಹೇಳುತ್ತಿದ್ದು, ಅಂಥವರಿಗೆ ನೀಟ್ ಫಲಿತಾಂಶದ ನಂತರ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗುವುದು’ ಎಂದರು.
ಆನ್ ಲೈನ್‌ನಲ್ಲಿ ದಾಖಲೆ ಪರಿಶೀಲನೆ: ‘ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಬಿಟ್ಟರೆ ಬಹುತೇಕ ಎಲ್ಲ ದಾಖಲೆಗಳ ಪರಿಶೀಲನೆ ಆನ್ ಲೈನ್‌ನಲ್ಲಿ ನಡೆಯಲಿದೆ. ಯಾರೂ ಕೆಇಎ ಕಚೇರಿಗೆ ಬರುವ ಅಗತ್ಯ ಇಲ್ಲ. ಅಭ್ಯರ್ಥಿಗಳು ಅಪ್ಲೋಡ್ ಮಾಡಿರುವ ಶೈಕ್ಷಣಿಕ ದಾಖಲೆಗಳನ್ನು (ವ್ಯಾಸಂಗ ಪ್ರಮಾಣಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರ, ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ, ಭಾಷಾ ಅಲ್ಪಸಂಖ್ಯಾತ ಮೀಸಲಾತಿ) ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನ್ ಲೈನ್‌ನಲ್ಲಿ ಪರಿಶೀಲನೆ ನಡೆಸಿ, ಮಂಜೂರಾತಿ ನೀಡುತ್ತಿದ್ದು, ಯಾವುದೇ ಗೊಂದಲ ಇಲ್ಲದೆ ಸಾಗಿದೆ. ಸೋಮವಾರಕ್ಕೆ ಇದು ಪೂರ್ಣವಾಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.