ADVERTISEMENT

ಸಿಇಟಿಗೆ ಪರೀಕ್ಷಾ ಪ್ರಾಧಿಕಾರ ಸಿದ್ಧತೆ

ಅನುತ್ತೀರ್ಣರಾದವರೂ ಪರೀಕ್ಷೆ ಬರೆಯಬಹುದು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 19:57 IST
Last Updated 26 ಏಪ್ರಿಲ್ 2019, 19:57 IST
   

ಬೆಂಗಳೂರು: ಎಂಜಿನಿಯರಿಂಗ್‌ ಮತ್ತಿತರ ವೃತ್ತಿ ಕೋರ್ಸ್‌ಗಳಿಗೆ ಇದೇ 29 ಮತ್ತು 30 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ನಡೆಸಿದೆ.

ರಾಜ್ಯದ ಒಟ್ಟು 431 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ನಡೆಯಲಿದೆ. ಈ ಬಾರಿ 1,94,282 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಬೆಂಗಳೂರಿನಲ್ಲಿ ಅತಿ ಹೆಚ್ಚು 43,736 ವಿದ್ಯಾರ್ಥಿಗಳು, ದಾಂಡೆಲಿ ಪರೀಕ್ಷಾ ಕ್ಷೇಂದ್ರದಲ್ಲಿ ಅತಿ ಕಡಿಮೆ 328 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡವರೂ ಪರೀಕ್ಷೆ ಬರೆಯಬಹುದು. ಅಂತಹವರು ಬಳಿಕ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಅವಕಾಶವಿದೆ. ಆದ್ದರಿಂದ ಪರೀಕ್ಷೆಗಾಗಿ ಹೆಸರು ನೋಂದಾಯಿಸಿರುವ ಎಲ್ಲ ವಿದ್ಯಾರ್ಥಿಗಳೂ ತಪ್ಪದೇ ಪರೀಕ್ಷೆ ಬರೆಯಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ADVERTISEMENT

ಇದೇ ಮೊದಲ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕವನ್ನೂ ಕಡಿಮೆ ಮಾಡಿದೆ. ಹಿಂದಿನ ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ₹650 ಶುಲ್ಕ ವಿಧಿಸಲಾಗುತ್ತಿತ್ತು. ಉಳಿದ ವಿದ್ಯಾರ್ಥಿಗಳಿಂದ ₹750 ಶುಲ್ಕ ಪಡೆಯಲಾಗುತ್ತಿತ್ತು. ಆದರೆ, ಈ ವರ್ಷ ಪರಿಶಿಷ್ಟಜಾತಿ ಮತ್ತು ವರ್ಗದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ₹ 250 ಶುಲ್ಕ ನಿಗದಿ ಮಾಡಲಾಗಿದೆ.

ಈ ಬಾರಿ ವಿದ್ಯಾರ್ಥಿಗಳು ಒಎಂಆರ್‌ ಶೀಟ್‌ನಲ್ಲೇ ಉತ್ತರ ಬರೆಯಬೇಕಾಗುತ್ತದೆ. ಮುಂದಿನ ವರ್ಷದಿಂದ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ.

ಈ ಬಾರಿ ಎಸ್‌ಸಿ 23,664, ಎಸ್‌ಟಿ 7,586, ಹೈದ್ರಾಬಾದ್‌ ಕರ್ನಾಟಕ(371 ಜೆ) ಭಾಗದ 32,843 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಲಿದ್ದಾರೆ. ಕೃಷಿ ಪ್ರಯೋಗ ಪರೀಕ್ಷೆ 16 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 87,635 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

ಮೇ 2ನೇ ವಾರ ಪಿಯು ಅಂಕಪಟ್ಟಿ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ ಎರಡನೇ ವಾರಅಂಕಪಟ್ಟಿ ನೀಡುವ ಸಾಧ್ಯತೆ ಇದೆ.

ಮರು ಎಣಿಕೆ ಮತ್ತು ಮರು ಮೌಲ್ಯಮಾಪನ ಪ್ರಕ್ರಿಯೆ ಮುಗಿದ ಬಳಿಕ ಅಂಕಪಟ್ಟಿಗಳನ್ನು ಆಯಾ ಕಾಲೇಜುಗಳಿಗೆ ಕಳಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.