ADVERTISEMENT

ರಾಜ್ಯದ 431 ಕೇಂದ್ರಗಳಲ್ಲಿ ಸುಗಮ ಸಿಇಟಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 19:52 IST
Last Updated 29 ಏಪ್ರಿಲ್ 2019, 19:52 IST
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಉತ್ತರ ಬರೆಯುತ್ತಿರುವ ಅಭ್ಯರ್ಥಿಗಳು
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಉತ್ತರ ಬರೆಯುತ್ತಿರುವ ಅಭ್ಯರ್ಥಿಗಳು   

ಬೆಂಗಳೂರು: ವೃತ್ತಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಸೋಮವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಬಹುದು ಎಂಬ ಆತಂಕ ಹುಸಿಯಾಗಿದೆ.

ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಮೊದಲೇ ಪ್ರಕಟವಾಗಿದ್ದರಿಂದ ಅನುತ್ತೀರ್ಣರಾದವರು ಮತ್ತು ಕಡಿಮೆ ಅಂಕ ಪಡೆದವರು ಸಿಇಟಿಗೆ ಕೂರಲು ಹಿಂದೇಟು ಹಾಕಬಹುದು ಎಂಬ ಆಂತಕ ವ್ಯಕ್ತವಾಗಿತ್ತು.

ಆದರೆ, ಸೋಮವಾರ ನಡೆದ ಜೀವಶಾಸ್ತ್ರ ಪರೀಕ್ಷೆಗೆ ಶೇ 75.90 ಮತ್ತು ಗಣಿತ ವಿಷಯಕ್ಕೆ ಶೇ 91.72 ರಷ್ಟು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ರಾಜ್ಯದಲ್ಲಿ ಒಂದೆರಡು ಕಡೆಗಳಲ್ಲಿ ಸಣ್ಣ– ಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ, ಪರೀಕ್ಷೆಯು ಸುಗಮವಾಗಿ ನಡೆಯಿತು.

ADVERTISEMENT

ರಾಜ್ಯದ 431 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರಿಂದ ಯಾವುದೇ ಗೊಂದಲಕ್ಕೂ ಕಾರಣವಾಗಲಿಲ್ಲ. ಪರೀಕ್ಷಾ ಕೇಂದ್ರದೊಳಗೆ ಯಾವ ಯಾವ ವಸ್ತುಗಳನ್ನು ತರಬಾರದು ಎಂಬ ಪಟ್ಟಿಯನ್ನು ಮೊದಲೇ ತಿಳಿಸಿದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು.

‘ಜೀವಶಾಸ್ತ್ರ ಪರೀಕ್ಷೆ ಸುಲಭವಾಗಿತ್ತು. ಆದರೆ, ಗಣಿತ ಕಠಿಣವಲ್ಲದಿದ್ದರೂ ತುಸು ತಿಣುಕಾಡಿಸುವಂತಿತ್ತು’ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.

ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶ ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಜೀವಶಾಸ್ತ್ರ ಪರೀಕ್ಷೆಗೆ ಹಾಜರಾಗುವುದಿಲ್ಲ. ಹೀಗಾಗಿ ಶೇ75.90 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅದರೆ, ಜೈವಿಕ ತಂತ್ರಜ್ಞಾನ, ಬಿ–ಫಾರ್ಮಾ, ಕೃಷಿ ವಿಜ್ಞಾನ, ವೆಟರ್ನರಿ ಕೋರ್ಸ್‌ಗಳಿಗೆ ಜೀವವಿಜ್ಞಾನ ಅಗತ್ಯ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಂಗಳವಾರ ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.