ADVERTISEMENT

ಸಿಇಟಿ ರ್‍ಯಾಂಕ್‌ ಪಟ್ಟಿಯಲ್ಲಿ ತಾರತಮ್ಯ: ಕೆಇಎ ಮುಂದೆ ಪ್ರತಿಭಟನೆ

ವಿದ್ಯಾರ್ಥಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 18:36 IST
Last Updated 30 ಜುಲೈ 2022, 18:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯು ಉತ್ತೀರ್ಣರಾಗಿದ್ದು, ಈ ಬಾರಿ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದ ವಿದ್ಯಾರ್ಥಿಗಳ ಪಿಯು ಅಂಕಗಳನ್ನು ರ್‍ಯಾಂಕ್‌ ಪಟ್ಟಿಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಿದರು.

ಸಾಮಾನ್ಯವಾಗಿ ಕೆಇಎನಲ್ಲಿ ಸಿಇಟಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳ ಅಂಕಗಳನ್ನು ಆಧಾರವಾಗಿ ಇಟ್ಟುಕೊಂಡೇ ರ್‍ಯಾಂಕಿಂಗ್‌ ನಿರ್ಧರಿಸಲಾಗುತ್ತದೆ. ಈ ಬಾರಿಯೂ ಅದೇ ರೀತಿ ಮಾಡಲಾಗಿದೆ. ಆದರೆ, ಕಳೆದ ಬಾರಿ ಪಿಯು ಉತ್ತೀರ್ಣರಾದವರ ಅಂಕಗಳನ್ನು ಕಡೆಗಣಿಸಲಾಗಿದೆ ಎಂದು ಪ್ರತಿಭಟನನಿರತರು ದೂರಿದರು.

ಕೋವಿಡ್ ಪಾಸ್‌ಗೆ ಸಿಇಟಿ ಅಂಕ ಮಾತ್ರ ಪರಿಗಣನೆ: ಕಳೆದ ವರ್ಷ ದ್ವಿತೀಯ ಪಿಯು ಉತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದು, ಅಂತಹ ವಿದ್ಯಾರ್ಥಿಗಳ ರ್‍ಯಾಂಕಿಂಗ್‌ ಅನ್ನು ಸಿಇಟಿ ಪರೀಕ್ಷೆಯ ಅಂಕಗಳನ್ನು ಆಧಾರಿಸಿಯೇ ನಿರ್ಧರಿಸಲಾಗಿದೆ.ಕೋವಿಡ್ ಇದ್ದ ಕಾರಣ ಹಿಂದಿನ ವರ್ಷ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸಿರಲಿಲ್ಲ. ಹಾಗಾಗಿ, ಕೇವಲ ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕ ಆಧಾರಿಸಿ ರ್‍ಯಾಂಕಿಂಗ್‌ ನೀಡಲಾಗಿತ್ತು. ಆ ವರ್ಷದ ವಿದ್ಯಾರ್ಥಿಗಳಿಗೆ ಅದೇ ನಿಯಮ ಅನ್ವಯವಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಪ್ರತಿಕ್ರಿಯಿಸಿದರು.

ADVERTISEMENT

ಕಳೆದ ವರ್ಷ ಪಿಯು ತೇರ್ಗಡೆಯಾದ ಸುಮಾರು 24 ಸಾವಿರ ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಪರೀಕ್ಷೆ ಇಲ್ಲದೆ ಪಿಯು ಫಲಿತಾಂಶ ನೀಡಿದ್ದ ಕಾರಣ ಸಹಜವಾಗಿ ಅವರ ಅಂಕಗಳು ಅತಿಹೆಚ್ಚಿವೆ. ಅವರೆಲ್ಲರ ಅಂಕಗಳನ್ನು ಪರಿಗಣಿಸಿದರೆ ಈ ವರ್ಷದ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗುತ್ತದೆ. ಅಲ್ಲದೇ, ಕಳೆದ ಬಾರಿ ಕೇವಲ ಸಿಇಟಿ ಪರೀಕ್ಷೆ ಮೇಲೆ ರ್‍ಯಾಂಕಿಂಗ್‌ ಪಡೆದು ಈಗ ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೂ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.