ADVERTISEMENT

ಕದ್ದ ಬೈಕ್‌ನಲ್ಲಿ ಸುತ್ತಾಡಿ ಸರ ಕಳವು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 16:59 IST
Last Updated 13 ಮಾರ್ಚ್ 2021, 16:59 IST
ಬಂಧಿತ ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ಪೊಲೀಸರ ತಂಡ
ಬಂಧಿತ ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ಪೊಲೀಸರ ತಂಡ   

ಬೆಂಗಳೂರು: ಬೈಕ್‌ಗಳನ್ನು ಕದ್ದು, ಅದೇ ಬೈಕ್‌ನಲ್ಲಿ ನಗರದಲ್ಲಿ ಸುತ್ತಾಡಿ ಸರಗಳವು ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಆಸಿಫ್‌ ಪಾಷಾ (28) ಮತ್ತು ಬೆಂಗಳೂರು ಕಾವಲ್‌ ಭೈರಸಂದ್ರದ ಅರ್ಷದ್ ಖಾನ್ (21) ಬಂಧಿತರು. ಅವರಿಂದ ₹ 6.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಯುಎಎಸ್ ಲೇಔಟ್ ಬಳಿ ನಿಲ್ಲಿಸಿದ್ದ ಮಗನ ಬೈಕ್ ಕಳುವಾದ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಲಾಗುತ್ತಿತ್ತು. ಫೆ. 28ರಂದು ಭೂಪಸಂದ್ರ ಬಸ್ ತಂಗುದಾಣ ಬಳಿ ಗಸ್ತಿನಲ್ಲಿದ್ದ ಪೊಲೀಸರು, ಆರೋಪಿಯ ಬೈಕ್‌ ತಡೆದು ಪರಿಶೀಲನೆ ನಡೆಸಿದ್ದರು. ಬೈಕ್‌ಗೆ ಯಾವುದೇ ದಾಖಲೆ ಇರಲಿಲ್ಲ. ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗಲೇ ಕೃತ್ಯ ಬಯಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳು, ದರೋಡೆ ಪ್ರಕರಣದಲ್ಲೂ ಭಾಗಿಯಾಗಿ ಜೈಲಿಗೂ ಹೋಗಿ ಜಾಮೀನು ಮೇಲೆ ಹೊರ ಬಂದಿದ್ದರು. ಒಟ್ಟಿಗೆ ಸೇರಿ ಸರಗಳವು ಮಾಡಲು ಮುಂದಾಗಿದ್ದರು. ಮನೆ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದಿಯುತ್ತಿದ್ದ ಆರೋಪಿಗಳು, ಅದೇ ಬೈಕ್‌ನಲ್ಲಿ ನಗರದಲ್ಲಿ ಸುತ್ತಾಡುತ್ತಿದ್ದರು.’

‘ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ವೇಳೆ ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು, ಅವರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಆರೋಪಿಗಳ ಬಂಧನದಿಂದ ನಾಲ್ಕು ಸರಗಳವು ಪ್ರಕರಣಗಳು ಪತ್ತೆಯಾಗಿವೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.