ADVERTISEMENT

ಸಭಾಪತಿ ಆಯ್ಕೆ: ಶೆಟ್ಟರಿಗೆ ಒಲಿದ ಅದೃಷ್ಟ

ನಾಮಪತ್ರ ಸಲ್ಲಿಕೆಗೆ ಸಿದ್ಧರಾಗಿದ್ದ ಎಸ್.ಆರ್‌. ಪಾಟೀಲ l ಸಿದ್ದರಾಮಯ್ಯಗೆ ‘ಮೂಲ’ದೇಟು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 20:00 IST
Last Updated 11 ಡಿಸೆಂಬರ್ 2018, 20:00 IST
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಪ್ರತಾಪ್ ಚಂದ್ರ ಶೆಟ್ಟಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ನೇತೃತ್ವದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು. ಸಚಿವ ಜಮೀರ್ ಅಹಮದ್ ಖಾನ್ ಮತ್ತಿತರರು ಇದ್ದಾರೆ   
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಪ್ರತಾಪ್ ಚಂದ್ರ ಶೆಟ್ಟಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ನೇತೃತ್ವದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು. ಸಚಿವ ಜಮೀರ್ ಅಹಮದ್ ಖಾನ್ ಮತ್ತಿತರರು ಇದ್ದಾರೆ      

ಬೆಂಗಳೂರು: ಸಿದ್ದರಾಮಯ್ಯ ವಿದೇಶಕ್ಕೆ ಹೋದ ಹೊತ್ತಿನಲ್ಲಿ ಪ್ರಭಾವ ಬಳಸಿದ ‘ಮೂಲ’ ಕಾಂಗ್ರೆಸಿಗರು, ಸಭಾಪತಿ ಸ್ಥಾನದಲ್ಲಿ ಹಿರಿಯ ಸದಸ್ಯ ಕೆ. ಪ್ರತಾಪ ಚಂದ್ರ ಶೆಟ್ಟಿ ಅವರನ್ನು ಕೂರಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.

ಸಭಾಪತಿ ಆಯ್ಕೆಗೆ ಬುಧವಾರ (ಡಿ.12) ಮತದಾನ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ಕಾಂಗ್ರೆಸ್‌ನ ಎಸ್.ಆರ್. ಪಾಟೀಲ ಎಲ್ಲ ಸಿದ್ಧತೆ ಮಾಡಿ ಕೊಂಡಿದ್ದರು. ಮಂಗಳವಾರ ಬೆಳಿಗ್ಗೆ 10.15ರ ಹೊತ್ತಿಗೆ ನಾಮಪತ್ರ ಸಲ್ಲಿಕೆಯ ಪೂರಕ ದಾಖಲೆಗಳಿಗೆ ಸಹಿಯನ್ನೂ ಹಾಕಿದ್ದರು. ಆ ಹೊತ್ತಿಗೆ ದಿಢೀರ್ ರಂಗಪ್ರವೇಶ ಮಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಇಡೀ ಚಿತ್ರಣವನ್ನೇ ಬದಲು ಮಾಡಿದರು. ಪ್ರತಾಪ ಚಂದ್ರಶೆಟ್ಟರನ್ನು ಕಣಕ್ಕೆ ಇಳಿಸುವಂತೆ ವರಿಷ್ಠರಿಂದ ನಿರ್ದೇಶನ ಬಂದಿದೆ ಎಂದು ದಿನೇಶ್ ಅವರು ಪಾಟೀಲರಿಗೆ ಮನವರಿಕೆ ಮಾಡಿದರು.

ಸಭಾ‍ಪತಿಯಾಗುವ ನಿರೀಕ್ಷೆಯೇ ಇಲ್ಲದಿದ್ದ ಪ್ರತಾಪಚಂದ್ರ ಶೆಟ್ಟಿ ಅವರನ್ನು ಕರೆತಂದು ನಾಮಪತ್ರ ಸಲ್ಲಿಸಲು ಸೂಚಿಸಿ
ದರು. ಸೂಚಕರಾಗಿ ಸಹಿ ಹಾಕುವಂತೆ ಎಸ್.ಆರ್. ಪಾಟೀಲರಿಗೆ ತಿಳಿಸಿದರು. ಸಭಾಪತಿ ಸ್ಥಾನಕ್ಕೆ ಶೆಟ್ಟರು ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರ ಆಯ್ಕೆ ಖಚಿತವಾಗಿದೆ.

ADVERTISEMENT

ಅಖಾಡಕ್ಕೆ ಇಳಿದ ಪರಮೇಶ್ವರ: ಪಕ್ಷದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸುವುದನ್ನು ತಪ್ಪಿಸಲು ಮೂಲ ಕಾಂಗ್ರೆಸಿಗರು ಒಂದಾದರು; ಇದರ ನೇತೃತ್ವವನ್ನು ಪರಮೇಶ್ವರ ವಹಿಸಿಕೊಂಡಿದ್ದಾರೆ ಎಂದು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.

ಹಂಗಾಮಿ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಅವರನ್ನು ಕಾಯಂ ಸಭಾಪತಿ ಮಾಡುವ ಆಲೋಚನೆ ಜೆಡಿಎಸ್‌ನಲ್ಲಿತ್ತು. ಆದರೆ, ಇದಕ್ಕೆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರ ಸಹಮತ ಇರಲಿಲ್ಲ.ಈ ಲೆಕ್ಕಾಚಾರದಂತೆ ಸಭಾಪತಿ ಆಯ್ಕೆಗೆ ಚುನಾವಣೆಯ ಅಧಿಸೂಚನೆ ಹೊರಬಿದ್ದಿತ್ತು. ವಿದೇಶಕ್ಕೆ ಹೋಗುವ ಮುನ್ನ ಈ ಬಗ್ಗೆ ಚರ್ಚಿಸಿದ್ದ ಸಿದ್ದರಾಮಯ್ಯ, ತಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಎಸ್.ಆರ್. ಪಾಟೀಲರನ್ನು ಸಭಾಪತಿ ಹುದ್ದೆಯಲ್ಲಿ ಕೂರಿಸಲು ನಿರ್ಧರಿಸಿದ್ದರು. ಎಲ್ಲವೂ ಸಿದ್ದರಾಮಯ್ಯ ಅಂದುಕೊಂಡಂತೆ ನಡೆದಿದ್ದರೆ ಪಾಟೀಲರು ಸಭಾಪತಿಯಾಗಿ ಬಿಡುತ್ತಿದ್ದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿ ಹೊಂದಿದ್ದ ಸಿದ್ದರಾಮಯ್ಯ, ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಕಣಕ್ಕೆ ಇಳಿದಿದ್ದರು. ಈ ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಪಾಟೀಲರು, ಸಿದ್ದರಾಮಯ್ಯ ಗೆಲುವಿಗೆ ಹಗಲಿರುಳು ಶ್ರಮಿಸಿದ್ದರು. ಪಾಟೀಲರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಇರಾದೆಯಿತ್ತಾದರೂ ಅದು ಸಾಧ್ಯವಾಗದ ಕಾರಣಕ್ಕೆ, ಸಭಾಪತಿ ಹುದ್ದೆಯಲ್ಲಿ ಕೂರಿಸುವ ಆಲೋಚನೆ ಸಿದ್ದರಾಮಯ್ಯ ಅವರದ್ದಾಗಿತ್ತು.

ಈ ತೀರ್ಮಾನ ಕೈಗೊಂಡಿದ್ದ ಸಿದ್ದರಾಮಯ್ಯ ವಿದೇಶಕ್ಕೆ ಹೋಗುವ ಮುನ್ನ, ಈ ಕೆಲಸವನ್ನು ಸುಸೂತ್ರವಾಗಿ ಮಾಡುವಂತೆ ಆಪ್ತರೂ ಆಗಿರುವ ದಿನೇಶ್ ಗುಂಡೂರಾವ್‌ಗೆ ನಿರ್ದೇಶನ ನೀಡಿದ್ದರು. ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಲೇಷ್ಯಾದಿಂದ ದಿನೇಶ್‌ಗೆ ಕರೆ ಮಾಡಿದ್ದ ಸಿದ್ದರಾಮಯ್ಯ, ‘ಪಾಟೀಲರಿಂದ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಮಾಡಪ್ಪ’ ಎಂದೂ ಸೂಚಿಸಿದ್ದರು.

ಪಾಟೀಲರು ಸಭಾಪತಿಯಾದರೆ ಸಿದ್ದರಾಮಯ್ಯ ಬಲ ಹೆಚ್ಚಲಿದೆ ಎಂದು ತರ್ಕಿಸಿದ ಮೂಲ ಕಾಂಗ್ರೆಸಿಗರು ಸಮಯಾವಕಾಶ ನೀಡಿ, ಒಳೇಟು ಕೊಡಲು ಅಣಿಯಾದರು. ರಾಜ್ಯಸಭಾ ಸದಸ್ಯ ಹಾಗೂ ಸೋನಿಯಾ ಗಾಂಧಿ ಅವರ ಆಪ್ ತವಲಯದಲ್ಲಿ ಗುರುತಿಸಿಕೊಂಡಿರುವ ಆಸ್ಕರ್ ಫರ್ನಾಂಡೀಸ್‌ಗೆ ಕರೆ ಮಾಡಿ, ಪಾಟೀಲರ ಬದಲು ಕರಾವಳಿಯ ಪ್ರತಾಪಚಂದ್ರ ಶೆಟ್ಟರನ್ನು ಆಯ್ಕೆ ಮಾಡಿಸುವ ಬಗ್ಗೆ ಪ್ರಭಾವ ಬೀರಿ ಎಂದು ಮನವಿ ಮಾಡಿಕೊಂಡರು. ರಾತ್ರೋರಾತ್ರಿ ನಡೆದ ಈ ಬೆಳವಣಿಗೆ ಪರಿಣಾಮವಾಗಿ ಪಾಟೀಲರಿಗೆ ಹುದ್ದೆ ತಪ್ಪಿ, ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ ಎಂದು ಕೈ ಪಾಳಯದಲ್ಲಿ ಚರ್ಚೆ ನಡೆದಿದೆ.

ಪಾಟೀಲರ ಬದಲು ಶೆಟ್ಟರು ಕಣಕ್ಕೆ ಇಳಿಯುವುದು ಸಚಿವರಿಗೆ, ‍ಪರಿಷತ್ತಿನ ಕಾಂಗ್ರೆಸ್ ಸದಸ್ಯರಿಗೆ, ಕೆಪಿಸಿಸಿ ಪ್ರಮುಖರಿಗೆ ಕೂಡ ಗೊತ್ತಿರಲಿಲ್ಲ. ಪರಮೇಶ್ವರ ಸೇರಿದಂತೆ ಸಿದ್ದರಾಮಯ್ಯ ವಿರೋಧಿ ಬಣದ ನಾಯಕರು ಹೆಣೆದ ತಂತ್ರ ಇದು ಎಂದು ಮೂಲಗಳು ಹೇಳಿವೆ.

ಪರಿಷತ್ತಿನ ಪ್ರಭಾವಿ ಹುದ್ದೆಗಳು ಕರಾವಳಿಗೆ

ಸಭಾಪತಿ ಹುದ್ದೆ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಒಲಿಯುವುದರೊಂದಿಗೆ ವಿಧಾನಪರಿಷತ್ತಿನ ಪ್ರಭಾವಿ ಪಟ್ಟಗಳು ಕರಾವಳಿಯವರಿಗೆ ಒಲಿದಂತಾಗಲಿವೆ.

ಪರಿಷತ್ತಿನ ಸಭಾನಾಯಕಿಯಾಗಿ ಕರಾವಳಿಯವರೇ ಆಗಿರುವ ಸಚಿವೆ ಜಯಮಾಲಾ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿ ಇದ್ದಾರೆ. ಹೀಗಾಗಿ ಮೂರು ಪ್ರಮುಖ ಹುದ್ದೆಗಳು ಕರಾವಳಿಗೆ ಸಿಕ್ಕಿದಂತಾಗಿದೆ.

ಶಾಸಕನೇ ಆಗುವುದಿಲ್ಲ ಎಂದಿದ್ದರು...

ವಿಧಾನಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದ್ದ ಪ್ರತಾಪಚಂದ್ರ ಶೆಟ್ಟರು ಸಭಾಪತಿಯಾಗಲಿದ್ದಾರೆ.

2015ರಲ್ಲಿ ನಡೆದ ಚುನಾವಣೆ ವೇಳೆ, ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಪತ್ರವನ್ನೂ ಶೆಟ್ಟರು ಬರೆದಿದ್ದರು. ಈ ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ನಿಲ್ಲುವುದು ಖಚಿತವಾಗಿತ್ತು. ಕೊನೆಗಳಿಗೆಯಲ್ಲಿ ಶೆಟ್ಟರ ಜತೆ ಮಾತನಾಡಿದ್ದ ಆಸ್ಕರ್ ಫರ್ನಾಂಡೀಸ್‌, ಕಣಕ್ಕೆಇಳಿಯಲು ಮನವೊಲಿಸಿದ್ದರು. ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಶೆಟ್ಟರು ವಿಜಯಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.