ಬೆಂಗಳೂರು: ಚಿತ್ತಾಪುರದ ಅಹಿತಕರ ಘಟನೆ ಕುರಿತು ಪೊಲೀಸ್ ಮಹಾನಿರ್ದೇಶಕ, ಮುಖ್ಯ ಕಾರ್ಯದರ್ಶಿ, ಗೃಹ ಸಚಿವ ಮತ್ತು ಮುಖ್ಯಮಂತ್ರಿಗೆ ದೂರು ಕೊಟ್ಟರೂ ಕ್ರಮ ಜರುಗಿಸಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಚಿತ್ತಾಪುರದಲ್ಲಿ ಐದು ಗಂಟೆ ನನ್ನನ್ನು ಕೂಡಿ ಹಾಕಿದ್ದರು. ನಮ್ಮ ಜನರು ಬರದಂತೆ ತಡೆದರು. ನನ್ನ ಕಾರಿನ ಮೇಲೆ ಮಸಿ ಸುರಿದರು. ಕಲ್ಲುಗಳನ್ನು ಜಮಾಯಿಸಿ ಇಟ್ಟಿದ್ದರು. ಮೊಟ್ಟೆ, ಕಲ್ಲು ತೂರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲಿಂದಲೇ ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರಿಗೆ ಕರೆ ಮಾಡಿ ಮಾತನಾಡಿದೆ. ಹಲವು ಬಾರಿ ಅಲ್ಲಿನ ಎಸ್.ಪಿ ಜತೆ ಮಾತನಾಡಿದ್ದೆ’ ಎಂದರು.
‘ಹೆಚ್ಚುವರಿ ಎಸ್.ಪಿ ಸ್ಥಳದಲ್ಲೇ ಇದ್ದರೂ ನಿಂದಿಸುವವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಐದು ಗಂಟೆಗಳ ನಂತರ ಹೊರಗೆ ಕಳುಹಿಸಿದರು. ಅಲ್ಲಿಂದ ನಾನು ಯಾದಗಿರಿಗೆ ಬಂದೆ. ಎಲ್ಲ ಕಾರ್ಯಕ್ರಮ ರದ್ದು ಮಾಡಿ ರಾತ್ರಿ ಬೆಂಗಳೂರಿಗೆ ವಾಪಸ್ ಆದೆ. ಚಿತ್ತಾಪುರಕ್ಕೆ ನನ್ನನ್ನು ನೋಡಲು ಬಂದಿದ್ದ ಬಿಜೆಪಿ ಮುಖಂಡ ಅಂಬಾರಾಯ ಅಷ್ಟಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಬಟ್ಟೆ ಹರಿದು ಬಿಸಾಡಿದ್ದರು. ಅವರ ಮೇಲೆ ದೂರು ಕೊಡಿಸಿದರು. ತಹಶೀಲ್ದಾರ್ ಕಚೇರಿಯಲ್ಲಿ ಕೂಡಿ ಹಾಕಿದ್ದರು. ಅದಕ್ಕಾಗಿಯೇ ನಾನು ರಿಪಬ್ಲಿಕ್ ಆಫ್ ಕಲಬುರಗಿ’ ಎಂದು ಟೀಕಿಸಿದ್ದಾಗಿ ಹೇಳಿದರು.
‘ದತ್ತಾತ್ರೇಯ ಶಾಂತಪ್ಪ ಇಕ್ಕಲಗಿ ಎಂಬವರು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ಅಡಿ ದೂರು ನೀಡಿದ್ದಾರೆ. ರಾಜ್ಯ ಸರ್ಕಾರ ಈಚೆಗೆ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಕೊಟ್ಟಿದೆ. ಪ್ರಶಸ್ತಿ ಋಣ ತೀರಿಸಲು ಅವರು ದೂರು ಕೊಟ್ಟಿದ್ದಾ? ರವಿಕುಮಾರ್ ಅವರು ಹೊಲೆಯ, ದಲಿತ ಎಂಬ ಪದಗಳನ್ನು ತಮ್ಮ ಭಾಷಣದಲ್ಲಿ ಬಳಸಿದ್ದರೆ ನಾನೇ ಅವರ ಮೇಲೆ ದೂರು ನೀಡುತ್ತೇನೆ’ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.