ADVERTISEMENT

ಯೂರಿಯಾ ಸಮಸ್ಯೆಗೆ ಕೇಂದ್ರವೇ ಕಾರಣ: ಸಚಿವ ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 15:37 IST
Last Updated 30 ಜುಲೈ 2025, 15:37 IST
ಎನ್‌.ಚಲುವರಾಯಸ್ವಾಮಿ
ಎನ್‌.ಚಲುವರಾಯಸ್ವಾಮಿ   

ಬೆಂಗಳೂರು: ‘ಕೇಂದ್ರ ಸರ್ಕಾರವು ಬೇಡಿಕೆಯಷ್ಟು ರಸಗೊಬ್ಬರ ಪೂರೈಸದ ಕಾರಣ ರಾಜ್ಯದಲ್ಲಿ ಯೂರಿಯಾ ಸಮಸ್ಯೆ ಸೃಷ್ಟಿಯಾಗಿದೆ. ಆದರೆ, ಬಿಜೆಪಿ ನಾಯಕರು ರಾಜಕೀಯ ಆಟವಾಡುತ್ತಿದ್ದಾರೆ. ರೈತರ ವಿಚಾರದಲ್ಲಿ ರಾಜಕೀಯ ಮಾಡಿದರೆ ಸುಮ್ಮನಿರಲ್ಲ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಬಿಜೆಪಿ ನಾಯಕರಾದ ಆರ್‌. ಅಶೋಕ, ಬಿ.ವೈ. ವಿಜಯೇಂದ್ರ ಮುಂತಾದವರು ರಸಗೊಬ್ಬರ ಕೊರತೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಅವರು ವಾಸ್ತವ ವಿಚಾರ ಅರಿತು ಮಾತನಾಡಬೇಕು’ ಎಂದರು.

‘ರಾಜ್ಯಕ್ಕೆ ಕೇಂದ್ರ ಸರ್ಕಾರ ನಿಗದಿತ ಪ್ರಮಾಣದಲ್ಲಿ ಯೂರಿಯಾ ಪೂರೈಕೆ ಮಾಡಿಲ್ಲ. ಜುಲೈ ತಿಂಗಳ ಅಂತ್ಯಕ್ಕೆ 1.36 ಲಕ್ಷ ಟನ್‌ ಯೂರಿಯಾ ಕೊರತೆಯಾಗಿದೆ. ಮುಂಗಾರು ಬೇಗ ಆರಂಭವಾಗಿ ಉತ್ತಮ ಮಳೆಯಾದ ಕಾರಣ‌ ಹೆಚ್ಚುವರಿಯಾಗಿ 2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಇದರಿಂದ ಯೂರಿಯಾ ಬೇಡಿಕೆ ಹಠಾತ್‌ ಏರಿಕೆಯಾಗಿದೆ. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಯೂರಿಯಾ ಸರಬರಾಜು ಮಾಡಿಲ್ಲ’ ಎಂದರು.

ADVERTISEMENT

‘ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ರಸಗೊಬ್ಬರ ರಫ್ತಾಗುತ್ತಿದೆ’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಗೊತ್ತಿಲ್ಲದೇ ಆರೋಪ ಮಾಡುವ ಬದಲು ವಾಸ್ತವ‌ ಅರಿತುಕೊಂಡು ಮಾತಾಡಬೇಕು. ಬಾಂಗ್ಲಾ ಹಾಗೂ ಶ್ರೀಲಂಕಾ ಗಡಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಹೀಗಾದರೆ, ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವನ್ನು ಬಿಜೆಪಿ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆಯೇ?’ ಎಂದು ವ್ಯಂಗ್ಯವಾಗಿ ಕೇಳಿದರು.

ಇತರೆ ರಾಜ್ಯಗಳಲ್ಲೂ ಸಮಸ್ಯೆ: ‘ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಿಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಕೆ ಆಗಿಲ್ಲ ಎಂಬ ಮಾಹಿತಿಯಿದೆ. ನಮ್ಮಲ್ಲಿ ರಸಗೊಬ್ಬರ ಕೊರತೆಯಾದಾಗ ಬೇರೆ ರಾಜ್ಯಗಳಿಂದ ತರಿಸಿಕೊಳ್ಳಲು ನಿಯಮದಲ್ಲಿ ಅವಕಾಶವಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.

‘ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಮತ್ತು ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದೆ’ ಎಂದೂ ಅವರು ಹೇಳಿದರು.

ನ್ಯಾನೊ ಯೂರಿಯಾ ಬಳಕೆಗೆ ಕ್ರಮ: ‘ನ್ಯಾನೊ ಯೂರಿಯಾ ಬಳಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ 38 ಸಾವಿರ ಟನ್‌ ಡಿಐಪಿ ಬಳಕೆ ಕಡಿಮೆಯಾಗಿದೆ.  ಒಮ್ಮೆಲೇ ನ್ಯಾನೊ ಯೂರಿಯಾ ಬಳಕೆ ಮಾಡುವಂತೆ ಒತ್ತಡ ಹೇರಲು ಸಾಧ್ಯವಿಲ್ಲ’ ಎಂದೂ ತಿಳಿಸಿದರು.

ರಾಜ್ಯದಲ್ಲಿ ರಸಗೊಬ್ಬರ ಸ್ಥಿತಿಗತಿ

  • ಕೇಂದ್ರದಿಂದ ಏಪ್ರಿಲ್‌ನಿಂದ ಜುಲೈವರೆಗೆ 6.82 ಲಕ್ಷ ಟನ್‌ ಹಂಚಿಕೆ

  • ಏಪ್ರಿಲ್‌ನಿಂದ ಈವರೆಗೆ 5.46 ಲಕ್ಷ ಟನ್‌ ಸರಬರಾಜು

  • ಸದ್ಯ ದಾಸ್ತಾನು 1.26 ಲಕ್ಷ ಟನ್‌

  • ಕೇಂದ್ರದಿಂದ ಸರಬರಾಜು ಬಾಕಿ 1.36 ಲಕ್ಷ ಟನ್‌

‘ಹೆಚ್ಚುವರಿ ₹ 600 ಕೋಟಿ ನೀಡಲು ಸಿದ್ಧ’

‘ರಸಗೊಬ್ಬರ ಪೂರೈಕೆಗೆ ಮೀಸಲಿಟ್ಟ ಅನುದಾನ ಕಡಿತಗೊಳಿಸಲಾಗಿದೆ ಎಂದೂ ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ಈ ಹಿಂದೆ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದ ₹ 400 ಕೋಟಿಯನ್ನು ನಾವು ಯಥಾಸ್ಥಿತಿ ಮುಂದುವರಿಸಿದ್ದೇವೆ. ಇನ್ನೂ ₹ 600 ಕೋಟಿ ಹೆಚ್ಚುವರಿ ನೀಡಲು ಸರ್ಕಾರ ಸಿದ್ಧವಿದೆ. ದಾವಣಗೆರೆ ಗದಗ ಕೊಪ್ಪಳ ಧಾರವಾಡ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯೂರಿಯಾ ಕೊರತೆಯಾಗಿದೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಪರ್ಯಾಯ ಕ್ರಮಕ್ಕೆ ‌ಚಿಂತನೆ ನಡೆಸಬೇಕಿದೆ’ ಎಂದು ಚಲುವರಾಯಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.