ADVERTISEMENT

ಚಾಮರಾಜನಗರ ದುರಂತ: ಆರೋಗ್ಯ ಸಚಿವರ ತಪ್ಪಿದ್ದರೆ ಕ್ರಮ ಜರುಗಿಸಲಿ -ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 4 ಮೇ 2021, 4:36 IST
Last Updated 4 ಮೇ 2021, 4:36 IST
 ಸಿ.ಟಿ.ರವಿ
 ಸಿ.ಟಿ.ರವಿ   

ಬೆಂಗಳೂರು: ‘ಚಾಮರಾಜನಗರ ದುರಂತಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲೇ ಬೇಕು. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದರೆ ಅದರ ಹೊಣೆಯನ್ನು ಸರ್ಕಾರ ಹೊರಬೇಕಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

‘ಈ ದುರಂತಕ್ಕೆ ಕಾರಣರಾದವರಿಗೆ ಕಠಿಣ ಕ್ರಮ ಜರುಗಿಸಿದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಬಹುದು. ಆರೋಗ್ಯ ಸಚಿವರು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಆಗಬೇಕು. ಕೂಡಲೇ ತನಿಖೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

‘ಮುಖ್ಯಮಂತ್ರಿಯವರ ಜತೆ ವಿವಿಧ ಜಿಲ್ಲೆಗಳ ಆಕ್ಸಿಜನ್‌ ಕೊರತೆ ಬಗ್ಗೆಯೂ ಚರ್ಚಿಸಿದ್ದೇನೆ. ವಿವಿಧ ರಾಜ್ಯಗಳಲ್ಲಿ ನಡೆದ ದುರ್ಘಟನೆಗಳು ನಮಗೆ ಪಾಠ ಆಗಬೇಕಿತ್ತು. ಇಂದು ನಮ್ಮ ರಾಜ್ಯದಲ್ಲೂ ದುರಂತ ಸಂಭವಿಸಿದೆ. ಜನರು ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ ಇದೆ’ ಎಂದೂ ತಿಳಿಸಿದರು.

ADVERTISEMENT

‘ಆಮ್ಲಜನಕದ ಸರಬರಾಜಿನ ವಿಚಾರದಲ್ಲಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಲೇ ಬೇಕು. ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿ, ಸಮರೋಪಾದಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.