ADVERTISEMENT

ಚಂದನ ಚಿರತೆ: ಭಾರತದಲ್ಲಿ 2ನೇ ಬಾರಿ, ರಾಜ್ಯದಲ್ಲಿ ಇದೇ ಮೊದಲ ಬಾರಿ ಗೋಚರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 0:05 IST
Last Updated 3 ಜನವರಿ 2026, 0:05 IST
<div class="paragraphs"><p>ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಟ್ಯ್ರಾಪಿಂಗ್‌ನಲ್ಲಿ ಸೆರೆಸಿಕ್ಕ ‘ಚಂದನ ಚಿರತೆ’ </p></div>

ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಟ್ಯ್ರಾಪಿಂಗ್‌ನಲ್ಲಿ ಸೆರೆಸಿಕ್ಕ ‘ಚಂದನ ಚಿರತೆ’

   

ಚಿತ್ರಕೃಪೆ: ಹೊಳೆಮತ್ತಿ ನೇಚರ್‌ ಫೌಂಡೇಶನ್‌

ಬೆಂಗಳೂರು: ಅತಿವಿರಳ ಸಂದರ್ಭದಲ್ಲಿ ರೂಪುಗೊಳ್ಳುವ ಗಂಧದ ಬಣ್ಣದ ಚರ್ಮ–ತುಪ್ಪಳ ಮತ್ತು ಮಂಕಾದ ಕಂದು ಬಣ್ಣದ ಚುಕ್ಕೆಗಳಿರುವ ಚಿರತೆಯು ರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಇದನ್ನು ಪತ್ತೆ ಮಾಡಿರುವ ವನ್ಯಜೀವಿ ತಜ್ಞರ ತಂಡವು, ಇದಕ್ಕೆ ‘ಚಂದನ ಚಿರತೆ’ ಎಂದು ಹೆಸರಿಟ್ಟಿದೆ.

ADVERTISEMENT

ಕಲ್ಯಾಣ ಕರ್ನಾಟಕ ಭಾಗದಲ್ಲಿನ ವನ್ಯಜೀವಿಗಳ ಅಧ್ಯಯನ ನಡೆಸುತ್ತಿರುವ ಹೊಳೆಮತ್ತಿ ನೇಚರ್‌ ಫೌಂಡೇಶನ್‌ (ಎಚ್‌ಎನ್‌ಎಫ್‌) ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್‌ ಸಾಧನಗಳನ್ನು ಅಳವಡಿಸಿತ್ತು. ಈ ಕ್ಯಾಮೆರಾಗಳಲ್ಲಿ ಅತ್ಯಪರೂಪದ ‘ಚಂದನ ಚಿರತೆ’ ಹಲವು ಬಾರಿ ಸೆರೆಯಾಗಿದೆ. 

ಸಾಮಾನ್ಯ ಚಿರತೆಗಳು ಹಳದಿ–ಕಂದು ಮಿಶ್ರಿತ ಚರ್ಮ ಮತ್ತು ಕಪ್ಪು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಆದರೆ, ಈ ಚಿರತೆಯು ಗಂಧದ ಬಣ್ಣವನ್ನು ಹೋಲುವ ಕೆಂಪು–ಗುಲಾಬಿ ಮಿಶ್ರಿತ ಬಣ್ಣದ ತುಪ್ಪಳ ಮತ್ತು ಮಾಸಲು ಕಂದು ಬಣ್ಣದ ಚುಕ್ಕೆ ಹೊಂದಿದೆ. ಜಗತ್ತಿನಾದ್ಯಂತ ಈವರೆಗೆ ಕೆಲವು ಬಾರಿಯಷ್ಟೇ ಈ ಸ್ವರೂಪದ ಚಿರತೆಗಳು ಪತ್ತೆಯಾಗಿವೆ.

‘ಜಾಗತಿಕವಾಗಿ ಇಂತಹದ್ದನ್ನು ಸ್ಟ್ರಾಬೆರಿ ಚಿರತೆ (Strawberry Leopard) ಎಂದು ಕರೆಯುತ್ತಾರೆ. ಆದರೆ ಈ ರೂಪಾಂತರಕ್ಕೆ ಸ್ಥಳೀಯ ಗುರುತನ್ನು ನೀಡಲು ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಲು ‘ಚಂದನ ಚಿರತೆ’ ಎಂದು ನಾಮಕರಣ ಮಾಡಲಾಗಿದೆ’ ಎಂದು ಎಚ್‌ಎನ್‌ಎಫ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಕೆಲವು ಬಾರಿ, ತಾಂಜೇನಿಯಾದಲ್ಲಿ ಒಂದು ಬಾರಿ, ರಾಜಸ್ಥಾನದ ರಣಕಪುರದಲ್ಲಿ 2021ರಲ್ಲಿ ಈ ಚಿರತೆ ಪತ್ತೆಯಾಗಿತ್ತು. ಭಾರತದಲ್ಲಿ ಇಂತಹ ಚಿರತೆ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ, ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಎಂದು ಎಚ್‌ಎನ್‌ಎಫ್‌ ಮಾಹಿತಿ ನೀಡಿದೆ. 

ಸಂಜಯ್‌ ಗುಬ್ಬಿ, ಸಂದೇಶ್‌ ಅಪ್ಪು ನಾಯ್ಕ್‌, ಶ್ರವಣ್‌ ಸುತಾರ್‌, ಪೂರ್ಣೇಶ ಎಚ್‌.ಸಿ., ರೂಮಾ ಕಂದುರ್ಕರ್‌, ರವಿಚಂದ್ರ ವೆಲಿಪ್‌, ದಯಾನಂದ ಮಿರಾಶಿ, ಸುಮಿತ್‌ ವೆಲಿಪ್‌, ಐಶ್ವರ್ಯ ಕಾರಂತ್‌ ಮತ್ತು ಮಯೂರ ಮಿರಾಶಿ ಅವರಿರುವ ಎಚ್‌ಎನ್‌ಎಫ್‌ ತಂಡವು ಈ ಚಿರತೆ ಕುರಿತಾದ ಅಧ್ಯಯನ ನಡೆಸುತ್ತಿದೆ.

‘ಮತ್ತಷ್ಟು ಅಧ್ಯಯನ ನಡೆಯಬೇಕಿದೆ’

ಚಿರತೆಯಲ್ಲಿನ ಆನುವಂಶಿಕ ಬದಲಾವಣೆಯಿಂದ ಅದರ ಚರ್ಮದಲ್ಲಿ ಅತಿಯಾದ ಕೆಂಪು ಬಣ್ಣ ಉತ್ಪಾದನೆಯಾಗಿ ಮತ್ತು ಗಾಢ ಬಣ್ಣದ ಕೊರತೆಯಿಂದ ಈ ವರ್ಣ ಸಂಯೋಜನೆ ರೂಪುಗೊಳ್ಳುತ್ತದೆ ಎಂದು ನಂಬಲಾಗಿದೆ. ಈ ಲಕ್ಷಣಗಳು ವಿಶಿಷ್ಟವಾಗಿದ್ದರೂ ನಿಖರವಾದ ಆನುವಂಶಿಕ ಬದಲಾವಣೆಯನ್ನು ದೃಢೀಕರಿಸಲು ಅವುಗಳ ಮಲ ಅಥವಾ ಕೂದಲುಗಳಿಂದ ಆನುವಂಶಿಕ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವ ಅಗತ್ಯವಿದೆ. ಅಲ್ಲಿಯವರೆಗೆ ಈ ಪ್ರಾಣಿಯನ್ನು ನಿರ್ದಿಷ್ಟ ಆನುವಂಶಿಕ ವಿಧಕ್ಕೆ (‘ಹೈಪೊಮೆಲನಿಸಮ್’ ಅಥವಾ ‘ಎರಿತ್ರಿಸಮ್’) ಸೇರಿಸುವ ಬದಲು ವಿರಳವಾದ ಬಣ್ಣದ ರೂಪಾಂತರವೆಂದು ಪರಿಗಣಿಸುವುದು ಸೂಕ್ತ. ಸಂಜಯ್‌ ಗುಬ್ಬಿ ಹೊಳೆಮತ್ತಿ ನೇಚರ್‌ ಫೌಂಡೇಶನ್‌ನ ಸಂಸ್ಥಾಪಕ

  • ವಿಜಯನಗರದ ಚಂದನ ಸುಂದರಿ 6–7 ವರ್ಷ ವಯಸ್ಸಿನ ಹೆಣ್ಣು ಚಿರತೆ

  • ಕೆಂಪು–ಗುಲಾಬಿ ಮಿಶ್ರಣದ ಗಂಧದ ಬಣ್ಣದ ಚರ್ಮ ಮತ್ತು ತುಪ್ಪಳ

  • ಮಾಸಲು ಅಥವಾ ಮಂಕಾದ ಕಂದು ಬಣ್ಣದ ಚುಕ್ಕೆಗಳು

  • ಸಾಮಾನ್ಯ ಬಣ್ಣದ ಮರಿಚಿರತೆಯೊಂದಿಗೂ ಈ ಚಂದನ ಚಿರತೆ ಕಾಣಿಸಿಕೊಂಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.